

ಭಟ್ಕಳ: ಅಕ್ರಮ ಗೋವು ಸಾಗಾಟ ಪ್ರಕರಣದಲ್ಲಿ ಸಿಲುಕಿಕೊಂಡವರ ಮೇಲೆ ಗೋಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಟ್ಕಳ ಹಿಂದು ಜಾಗರಣಾ ವೇದಿಕೆಯಿಂದ ಶಿರಸ್ತೇದಾರ್ ಪ್ರವೀಣ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆಗೆ ಪರೋಕ್ಷವಾಗಿ ಸಹಕರಿಸಿ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವುದು ಖಂಡನೀಯ. ತಾಲೂಕಿನ ಚೆಕ್ಪೋಸ್ಟ್ಗಳನ್ನು ಬಿಗಿಗೊಳಿಸಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಸಾಕಿದ ಗೋವುಗಳನ್ನು ಕಳುವು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕು ಆಡಳಿತವು ಪೊಲೀಸ್ ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಅಕ್ರಮ ಗೋಸಾಗಾಟ ಮತ್ತು ಗೋ ಹತ್ಯೆಗೆ ಕಡಿವಾಣ ಹಾಕಬೇಕು. ಗೋ ಸಾಗಾಟ ಮತ್ತು ಗೋ ಹತ್ಯೆ ಮಾಡುವ ಆರೋಪಿಗಳ ಮೇಲೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭಟ್ಕಳ ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಜಯಂತ ನಾಯ್ಕ ಬೆಣಂದೂರು, ಪ್ರಮುಖರಾದ ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ, ಕುಮಾರ ನಾಯ್ಕ ಹನುಮಾನ ನಗರ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ ಇತರರು ಇದ್ದರು.