‘ಭಟ್ಕಳ ಶಹರ ಸ್ಪೋಟ’ ನಿತಿನ್ ಶರ್ಮಾ ವಶಕ್ಕೆ

bkl_nitin sharma
Published on

ಭಟ್ಕಳ: ಪಟ್ಟಣವನ್ನು ಸ್ಪೋಟಗೊಳಿಸುವುದಾಗಿ ಇ-ಮೇಲ್ ಮೂಲಕ ಹಾಕಲಾದ ಬೆದರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಭಟ್ಕಳ ಪೊಲೀಸರು ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ.

ಈತ ಈಗಾಗಲೇ 16 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಖದೀಮಾಪರಾಧಿಯಾಗಿ ಗುರುತಿಸಿಕೊಂಡಿದ್ದಾನೆ. ಕೇರಳ, ಪುದುಚೇರಿ, ದೆಹಲಿ, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ಉತ್ತರಾಖಂಡ್ ಮತ್ತು ಕರ್ನಾಟಕದಲ್ಲಿ ಈತನ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿವೆ.

ಜುಲೈ 10ರಂದು ಬೆಳಗ್ಗೆ 7.23ರ ಸುಮಾರಿಗೆ ಭಟ್ಕಳ ಶಹರ ಪೊಲೀಸ್ ಠಾಣೆಗೆ  ಇ-ಮೇಲ್ ಬಂದಿತ್ತು. ತಕ್ಷಣವೇ ಪೊಲೀಸರು ಎಚ್ಚರಗೊಂಡು ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದರು.

ಆರಂಭಿಕ ತನಿಖೆಯಲ್ಲಿ ಇ-ಮೇಲ್ ಕಳಿಸಲು ಬಳಸಿದ ಮೊಬೈಲ್ ಐಎಂಇಐ ಆಧಾರದ ಮೇಲೆ ತಮಿಳುನಾಡಿನಲ್ಲಿ ಕಣ್ಣನ್ ಗುರುಸಾಮಿ ಎಂಬಾತನನ್ನು ಬಂಧಿಸಿದ ಭಟ್ಕಳ ಪೊಲೀಸರು ವಿಚಾರಣೆ ನಡೆಸಿದಾಗ ನಿಜವಾದ ಆರೋಪಿಯಾಗಿರುವ ನಿತಿನ್ ಶರ್ಮಾ ಬಗೆಗೆ ಮಾಹಿತಿ ಬಹಿರಂಗವಾಯಿತು.

ಜು. 10ರಂದು ನಿತಿನ್ ಶರ್ಮಾ ಕೇರಳದ ಮುನ್ನಾರ್ ಠಾಣೆಯಲ್ಲಿ ಬಂಧಿತನಾಗಿದ್ದು, ಅಲ್ಲಿಯೇ ಬಂಧಿತನಾಗಿದ್ದ ಕಣ್ಣನ್ ಗುರುಸಾಮಿಯಿಂದ ಮೊಬೈಲ್ ಪಡೆದು ಭಟ್ಕಳ ಪೊಲೀಸರಿಗೆ ಈ ಸಂದೇಶ ಕಳಿಸಿದ್ದನೆಂದು ತಿಳಿದುಬಂದಿತು.

2016-17ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಒಂದು ವರ್ಷ ಕಾಲ ಶಿಕ್ಷೆ ಅನುಭವಿಸಿದ್ದ ಈತನ ಹಿಂದಿನ ಹೆಸರು ನಿತಿನ್ ಶರ್ಮಾ ಎಂದು, ನಂತರ ಖಾಲಿದ್ ಹೆಸರು ಬದಲಾಯಿಸಿಕೊಂಡಿದ್ದಾನೆ. ಧರ್ವಂತರವಾದ ವಿಚಾರದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಇನ್​ಸ್ಪೆಕ್ಟರ್ ದಿವಾಕರ ಪಿ.ಎಂ., ಪಿಎಸ್​ಐ ನವೀನ ನಾಯ್್ಕ ಸೋಮರಾಜ ರಾಠೋಡ ತನಿಖೆ ನೇತೃತ್ವ ವಹಿಸಿದ್ದರು. ಬಾಡಿ ವಾರಂಟ್ ಪಡೆದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಲಾಗಿದೆ.

ಬೇರೆಯವರ ಫೋನ್ ಬಳಸಿ ಭಯ ಹುಟ್ಟಿಸಿ ತಾನು ತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮನ ಆಟ ಪೊಲೀಸ್ ತನಿಖೆ ಎದುರು ನಡೆಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net