

ಭಟ್ಕಳ: ತಾಲೂಕಿನಲ್ಲಿ ಅಪರಾಧ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂಟಿ ಮನೆಗೆ ಮಾತ್ರ ಸೀಮಿತವಾಗಿದ್ದ ಕಳ್ಳತನ ಪ್ರಕರಣ ಹೆದ್ದಾರಿ ಬದಿಯಲ್ಲಿ ವಿಸ್ತರಣೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಪ್ರಸಿದ್ಧ ತಾಣ ಮುರ್ಡೇಶ್ವರ, ಶಿರಾಲಿ ಸೇರಿ ಪಟ್ಟಣದ ನಾಗಪ್ಪ ನಾಯಕ ರಸ್ತೆ, ಹನೀಫಾಬಾದ್, ಮಣ್ಕುಳಿ ಹೀಗೆ ಒಂದರ ಮೇಲೆ ಒಂದರಂತೆ ತಾಲೂಕಿನ ಯಾವುದಾದರೂ ಭಾಗದಲ್ಲಿ ನಿತ್ಯ ಕಳ್ಳತನ ನಡೆಯುತ್ತಿವೆ. ರಸ್ತೆ ಬದಿ ನಿಲ್ಲಿಸಿಟ್ಟ ವಾಹನಗಳ ಬ್ಯಾಟರಿ, ಟಯರ್‌ಗಳ ಕಳ್ಳತನವಾಗುತ್ತಿದೆ. ಪ್ರಕರಣ ಬೇಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕಣ್ಮುಚ್ಚಿದ ಸಿಸಿ ಕ್ಯಾಮರಾಗಳು: ಭಟ್ಕಳದಲ್ಲಿ 53 ಸಿಸಿ ಕ್ಯಾಮರಾಗಳಿದ್ದು, ಅದರಲ್ಲಿ ಬೆರಳಣಿಕೆಯ ಸಿಸಿ ಕ್ಯಾಮರಾಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 45 ಸಿಸಿ ಕ್ಯಾಮರಾಗಳು ನಿರ್ವಹಣೆ ಇಲ್ಲದೆ ಕಣ್ಮುಚ್ಚಿ ಕುಳಿತಿವೆ. ಈ ಬಗ್ಗೆ ಪೊಲೀಸ್ ಇಲಾಖೆಯನ್ನು ಕೇಳಿದರೆ ‘ನಾವು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಮಾತ್ರ ಮಾನಿಟರ್ ಮಾಡುತ್ತೇವೆ’ ಎನ್ನುತ್ತಾರೆ. ಪುರಸಭೆಯವರನ್ನು ಕೇಳಿದರೆ ‘ನಾವು ಅದನ್ನು ಈಗಾಗಲೇ ಪೊಲೀಸ್ ಇಲಾಖೆ ವಶಕ್ಕೆ ನೀಡಿದ್ದು, ಅದರ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು’ ಎನ್ನುತ್ತಾರೆ.
ಪಟ್ಟಣದಲ್ಲಿ ಅಳವಡಿಸಿದ ಕ್ಯಾಮರಾಗಳು ಗುಣಮಟ್ಟದಲ್ಲೂ ಅತ್ಯಂತ ಒಳ್ಳೆಯದಿದ್ದು, ವಾಹನಗಳ ನಂಬರ್ ಪ್ಲೇಟ್ ಕೂಡ ಸ್ಕಾೃನ್ ಮಾಡುತ್ತದೆ. ಆದರೆ, ನಿರ್ವಹಣೆ ಇಲ್ಲದೆ ಮಕಾಡೆ ಮಲಗಿದ್ದು, ಯಾವ ಪ್ರಯೋಜನವಿಲ್ಲದಂತೆ ಆಗಿದೆ. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರದಲ್ಲೂ ಇಲಾಖೆ ವತಿಯಿಂದ ಸಿಸಿ ಕ್ಯಾಮರಾ ಇಲ್ಲ. ಇದರಿಂದ ಪ್ರವಾಸಿಗರಿಗೆ ಅಭದ್ರತೆ ಕಾಡುತ್ತಿದೆ.
ಪೊಲೀಸರ ಭಯವೇ ಇಲ್ಲ !: ಕಳ್ಳತನ, ದರೋಡೆ ಕೊಲೆ ಸೇರಿ ವಿವಿಧ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಇದು ಕೃತ್ಯಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಕಳ್ಳರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಇಲ್ಲಿಯವರೆಗೆ ಕೆಲ ಸಣ್ಣ-ಪುಟ್ಟ ಗಾಂಜಾ ಮಾರಾಟ ಹಾಗೂ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿರುವ ಪೊಲೀಸರು ಗಂಭೀರ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ನಗರದ ಜನರಿಂದ ಕೇಳಿ ಬರುತ್ತಿವೆ.
ಹೆಚ್ಚಿದ ಆನ್‌ಲೈನ್ ವಂಚನೆ
ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ಆನ್‌ಲೈನ್ ಕಳ್ಳರು ಹಣ ಲಪಟಾಯಿಸುವ ಪ್ರಕರಣಗಳು ಅಧಿಕವಾಗಿವೆ. ಹಣ ಕಳೆದುಕೊಂಡವರಿಗೆ ನ್ಯಾಯ ದೊರಕಿಸುವುದು ಹಾಗೂ ಅಪರಾಧಿಗಳನ್ನು ಬಂಧಿಸಿರುವುದು ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗಿಲ್ಲ. ಹೊಸ ಮಾದರಿಯಲ್ಲಿ ಆನ್‌ಲೈನ್ ಮೂಲಕ ಹಣ ಲೂಟಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ.
ಪ್ರಯೋಜನವಾಗದ ಸುಸಜ್ಜಿತ ವ್ಯವಸ್ಥೆ
ಪಟ್ಟಣದಲ್ಲಿ ರಾತ್ರಿ ವೇಳೆ 6 ಸುಧಾರಿತ ಹೊಸ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ರಾತ್ರಿಯಲ್ಲಿ 2 ವಾಹನಗಳು ಗಸ್ತು ತಿರುಗುತ್ತವೆ. ಗ್ರಾಮೀಣ ಭಾಗದಲ್ಲಿ 12 ಬೀಟ್ ವ್ಯವಸ್ಥೆ ಇದ್ದು ರಾತ್ರಿ ಸಮಯದಲ್ಲಿ 2 ಬೀಟ್‌ಗಳು ಕಾರ್ಯ ನಿರ್ವಹಿಸುತ್ತವೆ. ಗ್ರಾಮೀಣ ಭಾಗದಲ್ಲಿ ಕಳೆದ ವರ್ಷ 9 ಕಳ್ಳತನ ಪ್ರಕರಣ ನಡೆದರೆ, ನಗರದಲ್ಲಿ ಇದರ ಸಂಖ್ಯೆ 9. ಅದರಲ್ಲಿ ಕಳೆದ ಒಂದೇ ವಾರದಲ್ಲಿ 5 ಪ್ರಕರಣ ದಾಖಲಾಗಿವೆ.