

ಭಟ್ಕಳ: ಶಿರಾಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇನ್ನೊಂದು ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಅಳ್ವೆಕೋಡಿಯ ರಾಮಚಂದ್ರ ನಾಗೇಶ ಮೊಗೇರ (42) ಮೃತಪಟ್ಟ ಸವಾರ. ಭಾನುವಾರ ರಾತ್ರಿ ಕೈಕಿಣಿಯಿಂದ ಅಳ್ವೆಕೋಡಿಗೆ ತೆರಳುತ್ತಿದ್ದ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ. ಬಳಿಕ ಅದೇ ಕಾರು ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ ಶಿರಾಲಿಯ ರವಿಶಂಕರ ನಾಯ್ಕ, ರೇವತಿ ನಾಯ್ಕ, ಪ್ರತಿಕ್ಷಾ ನಾಯ್ಕ ಎಂಬುವರು ಗಾಯಗೊಂಡಿದ್ದಾರೆ. ಅಪಘಾತಪಡಿಸಿದ ಕಾರಿನ ಚಾಲಕ ವಾಹನವನ್ನು ವೆಂಕಟಾಪುರ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.