ಮುಗಿಯದ ಖರೀದಿ ಕೇಂದ್ರದ ಗೋಳು: ಸಾಫ್ಟ್‌ವೇರ್ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆದ ಎಂಎಲ್‌ಸಿ ದಿನೇಶ್ ಗೂಳಿಗೌಡ

17_01_Mdy_01(A)(Karidhi Kendra)Mlc Dinesh Gooligowda
Published on

ಮಂಡ್ಯ: ಪ್ರತಿ ವರ್ಷದಂತೆ ಈ ಬಾರಿಯೂ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಮುಂದುವರಿದಿದೆ.

ಈಗಾಗಲೇ ಬಹುತೇಕ ಬೆಳೆ ದಲ್ಲಾಳಿಗಳ ಪಾಲಾಗಿದ್ದರೂ ಸರ್ಕಾರದಿಂದ ಖರೀದಿ ಮಾತ್ರ ಪ್ರಾರಂಭವಾಗಿಲ್ಲ. ಇದೀಗ ಸಾಫ್ಟ್‌ವೇರ್ ಸಮಸ್ಯೆ ಎದುರಾಗಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಖರೀದಿ ಕೇಂದ್ರ ಪ್ರಾರಂಭವಾಗದಿರುವ ಹಾಗೂ ಅದರಿಂದ ಆಗುತ್ತಿರುವ ಸಮಸ್ಯೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರದ ಮೂಲಕ ವಿವರಿಸಿರುವ ಎಂಎಲ್‌ಸಿ, ಕಳೆದ ನವೆಂಬರ್ ತಿಂಗಳಿನಲ್ಲಿಯೇ ಕೇಂದ್ರವನ್ನು ಆರಂಭ ಮಾಡಿದ್ದರೂ ಇದುವರೆಗೂ ಒಂದು ಕ್ವಿಂಟಾಲ್ ಭತ್ತ ಹಾಗೂ ರಾಗಿಯನ್ನೂ ಖರೀದಿ ಮಾಡಲಾಗಿಲ್ಲ. ಈ ಬಗ್ಗೆ ಕಾರಣ ಕೇಳಿದರೆ ಸಾಫ್ಟ್‌ವೇರ್ ಸಮಸ್ಯೆಯ ಕಾರಣ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಾಫ್ಟ್‌ವೇರ್ ದುರಸ್ತಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟು, ಖರೀದಿ ಪ್ರಕ್ರಿಯೆಗೆ ಚಾಲನೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿಯಲ್ಲೇನಿದೆ?: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 61,459 ಹೆಕ್ಟೇರ್ ಭೂಮಿಯಲ್ಲಿ ಸುಮಾರು 50 ಲಕ್ಷ ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ(ಎಂಎಸ್‌ಪಿ) ಈ ಭತ್ತವನ್ನು ಖರೀದಿ ಮಾಡುವಂತೆ ನವೆಂಬರ್ ತಿಂಗಳಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿ, ಯೋಜನೆಯಡಿ ಭತ್ತ ಮಾರಾಟ ಮಾಡಲು ಇಚ್ಛಿಸಿದ ರೈತರ ಹೆಸರು ನೋಂದಾಯಿಸಲು ಸೂಚಿಸಿತ್ತು. ಜಿಲ್ಲೆಯಲ್ಲಿ 18,859 ರೈತರು 4 ಲಕ್ಷ 68 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಭತ್ತವನ್ನು ನೀಡುವುದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸಾಫ್ಟ್‌ವೇರ್ ಸಿದ್ಧವಾಗಿಲ್ಲ ಎಂಬ ಕಾರಣ ನೀಡಿ ಇದುವರೆಗೂ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿಲ್ಲ.

ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ 10 ಲಕ್ಷ ಕ್ವಿಂಟಾಲ್ ರಾಗಿ ಬೆಳೆಯಲಾಗಿದೆ. 30,215 ರೈತರು 4 ಲಕ್ಷ 20 ಸಾವಿರಕ್ಕೂ ಅಧಿಕ ಕ್ವಿಂಟಾಲ್ ರಾಗಿಯನ್ನು ಬೆಂಬಲ ಯೋಜನೆಯಡಿ ಮಾರಾಟ ಮಾಡಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಆದರೀಗ ವಿಳಂಬ ಮಾಡುತ್ತಿರುವುದು ನಿಜಕ್ಕೂ ತೀವ್ರ ಸಮಸ್ಯೆಯಾಗಿದೆ. ಬೆಳೆಗಳ ಬೆಲೆ ಕುಸಿತ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕೃಷಿ ಕಾರ್ಮಿಕರ ಕೊರತೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ರೈತರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಇದೆ. ಇದರ ನಡುವೆ ಸರ್ಕಾರವೂ ಸೂಕ್ತ ಸಮಯದಲ್ಲಿ ನೆರವಿಗೆ ಬಾರದಿದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬವಾದಲ್ಲಿ ರೈತರು ಮದ್ಯವರ್ತಿಗಳ ಹಾವಳಿಗೆ ತುತ್ತಾಗಿ ಕಡಿಮೆ ಬೆಲೆಗೆ ಭತ್ತ, ರಾಗಿ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಲಿದೆ. ತಾವು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಶೀಘ್ರ ಸಾಫ್ಟ್‌ವೇರ್ ಸಮಸ್ಯೆ ಬಗೆಹರಿಸಿ ಭತ್ತ, ರಾಗಿ ಖರೀದಿ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net