30ರಿಂದ ಭತ್ತ ಖರೀದಿಗೆ ನೋಂದಣಿ

13_11_Mdy_Dc Meeting 02
Published on

ಮಂಡ್ಯ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವ ಸಲುವಾಗಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ನ.30 ರಿಂದ ಡಿ.30ರವರೆಗೆ ನೋಂದಣಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2020-21ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತವನ್ನು ಕ್ವಿಂಟಾಲ್‌ಗೆ 1,868 ರೂ ಹಾಗೂ ಗ್ರೇಡ್ ಎ ಭತ್ತವನ್ನು ಕ್ವಿಂಟಾಲ್‌ಗೆ 1,888ಕ್ಕೆ ಖರೀದಿಸಲು ಸರ್ಕಾರ ಆದೇಶಿಸಿದೆ. ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದರು.
ಡಿ.1ರಿಂದ 10ರವರೆಗೆ ಅಕ್ಕಿ ಗಿರಣಿಗಳಲ್ಲಿ ಸಂಗ್ರಹಣೆ ಮತ್ತು ಇತರೆ ವ್ಯವಸ್ಥೆ ಮಾಡಬೇಕು. ಇದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ಪರಿಶೀಲನೆಗಾಗಿ ಪರೀಕ್ಷಕರ ನೇಮಕಾತಿ, ತರಬೇತಿ, ಅಕ್ಕಿ ಗಿರಣಿಗಳ ಹಲ್ಲಿಂಗ್, ಭತ್ತ ಸಂಗ್ರಹಣೆ ಸಾಮರ್ಥ್ಯ ವಿವರ ಪಡೆದು ನೋಂದಾಯಿಸುವ ಕೆಲಸ ಮಾಡಬೇಕು. ಕಳೆದ ಬಾರಿ ಉಚಿತವಾಗಿ ಆನ್‌ಲೈನ್ ಪ್ರೊಕ್ಯೂರ್‌ಮೆಂಟ್‌ನಲ್ಲಿ ನೋಂದಣಿ ಮಾಡಿಕೊಂಡ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿ ಮಾಡಿಕೊಳ್ಳಿ ಎಂದು ಮಾರ್ಕೆಂಟಿಗ್ ಫೆಡರೇಶನ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಕುಮುದಾ ಶರತ್, ಜಿಲ್ಲಾ ವಾರ್ತಾಧಿಕಾರಿ ಟಿ.ಕೆ.ಹರೀಶ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net