

ಸಿದ್ದಾಪುರ(ಕೊಪ್ಪಳ): ಭಸ್ಮಕ್ಕೆ ಸಕಲ ಪಾಪಗಳನ್ನು ಪರಿಹರಿಸುವ ಶಕ್ತಿಯಿದೆ ಎಂದು ಹಿಮಾವತ್ ಕೇದಾರ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೀರಪ್ಪಯ್ಯ ಸ್ವಾಮಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನಾತನ ಧರ್ಮ ಜಾಗೃತಿ ಅಭಿಯಾನದಲ್ಲಿ ಆಶೀರ್ವಚನ ನೀಡಿದರು. ಸನಾತನ ಧರ್ಮವೆಂದರೆ ಸತ್ಯವಾದ ಆಚರಣೆಗಳು ಎಂದರ್ಥ. ವೈರಾಗ್ಯದಲ್ಲಿ ನಾಲ್ಕು ವಿಧಗಳಿವೆ. ಪುರಾಣ, ಪ್ರಸೂತಿ, ಸ್ಮಶಾನ ಈ ಮೂರು ಕ್ಷಣಿಕವಾದವು. ಆದರೆ, ನಾಲ್ಕನೇಯದು ಸತ್ಯವೇ ಸ್ಥರ ವೈರಗ್ಯವಾಗಿದೆ. ಭಸ್ಮ, ಲಿಂಗ ಹಾಗೂ ರುದ್ರಾಕ್ಷಿಗಳು ಸನಾತನ ಧರ್ಮಕ್ಕೆ ಮೂಲಾಧಾರಗಳಾಗಿವೆ. ಸನಾತನ ಆಚರಣೆಗಳನ್ನು ನಾವೆಲ್ಲರೂ ಪಾಲಿಸಬೇಕು. ಆಚಾರ ಬಿಟ್ಟು ನಡೆಯದೆ, ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ಕೋಟಿ ಗೋವುಗಳನ್ನು ದಾನ ಮಾಡಿದರೆ ದೊರೆಯುವಷ್ಟು ಪುಣ್ಯ, ಒಂದು ರುದ್ರಾಕ್ಷಿ ಧರಿಸುವುದರಿಂದ ದೊರೆಯುತ್ತದೆ ಎಂದರು.
ಸಿಂಧನೂರಿನ ರೇಣುಕಾಶ್ರಮದ ಶ್ರೀ ಸೋಮನಾಥ ಶಿವಾಚಾರ್ಯರು ಮಾತನಾಡಿ, ಭತ್ತದ ನಾಡು ಇಂದು ಹಿಮಾವತ್ ಕೇದಾರ ಜಗದ್ಗುರುಗಳ ಆಶೀರ್ವಾದದಿಂದ ಭಕ್ತಿಯ ನಾಡಾಗಿದೆ. ಕೈಲಾಸದ ಕೇದಾರನಾಥ 6 ತಿಂಗಳು ಜಗದ್ಗುರುಗಳಿಂದ ಪೂಜೆ ಸ್ವೀಕರಿಸಿದರೆ, ಉಳಿದ ಆರು ತಿಂಗಳು ದೇವತೆಗಳಿಂದ ಪೂಜಿಸಲ್ಪಡುತ್ತಾನೆ. ಸಾಕ್ಷಾತ್ ಕೇದಾರನಾಥನ ಕೃಪೆಗೆ ಪಾತ್ರರಾದ ಶಿವಾಚಾರ್ಯರ ಆಶೀರ್ವಾದದಿಂದ ಕೈಲಾಸವೇ ಇಂದು ಭೂಮಿಗಿಳಿದಿದೆ ಎಂದರು.
ತಪೋಕ್ಷೇತ್ರ ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಅಪರಾಧಗಳ ಫಲವೇ ನಾವು ಅನುಭವಿಸುವ ದುಃಖ. ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಇದು ಸಾಧ್ಯವಾದರೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು. ಹಿರೇಮಠದ ಪಾಲಕ್ಷಯ್ಯ ಸ್ವಾಮಿ, ಶಿವಕುಮಾರ್ ಸ್ವಾಮಿ, ಉಮೇಶ ಸ್ವಾಮಿ, ಮಹೇಶ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಗಣೇಶಯ್ಯ ಸ್ವಾಮಿ, ಶಿವಯೋಗಿ ಕಂಬಾಳಿಮಠ ಇತರರಿದ್ದರು.