

ರಟ್ಟಿಹಳ್ಳಿ: ಪಟ್ಟಣದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಮಂಗಳವಾರ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಅಪಾರ ಭಕ್ತರ ಸಮ್ಮುಖದಲ್ಲಿ ಭಸ್ಮ ಕಾರ್ಯಕ್ರಮ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮ ಸಡಗರದಿಂದ ಜರುಗಿದವು.
ಮಹಾಲಕ್ಷ್ಮೀ ದೇವಿಗೆ ಬೆಳಗ್ಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ಜರುಗಿದವು. ಬೆಳಗ್ಗೆ 6 ಗಂಟೆಯಿಂದ ಭಕ್ತರು ಸರದಿಯಯಲ್ಲಿ ಬಂದು ದೇವಿಯ ದರ್ಶನ ಪಡೆದರು. ಬೆಳಗ್ಗೆಯಿಂದ ಭಕ್ತರು ಇಷ್ಟಾರ್ಥ ಈಡೇರಿಕೆಗೆ ಕೋರಿ ದೇವಸ್ಥಾನದ ಮುಂಭಾಗದಲ್ಲಿ ಇರುವ ಅಗ್ನಿಕುಂಡದಲ್ಲಿ ಒಣಕೊಬ್ಬರಿ ಬಟ್ಟಲು, ತುಪ್ಪ, ವಸ್ತ್ರಗಳನ್ನು ಹಾಕಿದರು. ರಟ್ಟಿಹಳ್ಳಿ, ಶಿರಗಂಬಿ, ಮಕರಿ, ಕುಡುಪಲಿ, ಹಿರೇಮೊರಬ, ದೊಡ್ಡಗುಬ್ಬಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮತ್ತು ವಿವಿಧ ಜಿಲ್ಲೆಗಳಿಂದ ಅನೇಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಭಸ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ರಾತ್ರಿ 9.30ಕ್ಕೆ ದೇವಿಯ ಸಮ್ಮುಖದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಮತ್ತು ಶ್ರೀ ಹೊಳೆಸಾಲು ದುರ್ಗಾದೇವಿ ಆಗಮನದ ನಂತರ ಮುತೆôದೆಯರು ಉಡಿ ತುಂಬಿದರು. ಬಳಿಕ ಅಗ್ನಿಕುಂಡದಲ್ಲಿ ಭಸ್ಮ ಕಾರ್ಯಕ್ರಮ ಪ್ರಾರಂಭವಾಯಿತು. ರಾತ್ರಿಯಿಡಿ ಡೊಳ್ಳು ಕುಣಿತ ಮತ್ತು ಭಜನೆ ಜರುಗಿತು. ಬೆಳಗ್ಗೆ ಭಕ್ತರು ಭಸ್ಮವನ್ನು ಕೊಂಡೊಯ್ದರು.
ಸಂಗೀತ ಕಾರ್ಯಕ್ರಮ: ತಾಲೂಕಿನ ಶಿರಗಂಬಿ ಗ್ರಾಮದ ಶ್ರೀ ಶಿವಾನಂದ ಶಿವಾನುಭವ ಸೇವಾ ಸಮಿತಿಯಿಂದ ಭಕ್ತಿಗೀತೆ, ತತ್ವಪದಗಳು, ಜಾನಪದ, ಭಾವಗೀತೆಗಳೊಂದಿಗೆ ಸಂಜೆ ಸಂಗೀತ ಸೇವೆ ಕಾರ್ಯಕ್ರಮ ಜರುಗಿದವು.
ಶಿರಗಂಬಿ ಶಾಲಾ ವಿದ್ಯಾರ್ಥಿನಿಯರಿಂದ ಭರತನಾಟ್ಯ ಜರುಗಿತು. ಸಂಗೀತ ಕಾರ್ಯಕ್ರಮವನ್ನು ಸ್ಥಳೀಯ ಕಬ್ಬಿಣಕಂತಿ ಮಠದ ಸ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ದೇವಸ್ಥಾನದ ಕಮಿಟಿ ಅಧ್ಯಕ್ಷ ದ್ಯಾವಪ್ಪ ದ್ಯಾವಕ್ಕಳವರ, ಕಮಿಟಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.