

ಉಡುಪಿ: ಎನ್‌ಆರ್‌ಐ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್‌ಗೆ ಜೀವಿತಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಇವರ ಕೈವಾಡ ಸಾಬೀತುಪಡಿಸುವಲ್ಲಿ ಸಿಐಡಿ ಮತ್ತು ಫಾರೆನ್ಸಿಕ್ ತಜ್ಞರ ತಂಡದ ಪರಿಶ್ರಮ ಮಹತ್ವದ ಪಾತ್ರ ವಹಿಸಿದೆ. ಮೃತದೇಹ ಇಲ್ಲದಿದ್ದರೂ ವೈಜ್ಞಾನಿಕ ಆಯಾಮದ ತನಿಖೆ ಮೂಲಕ ಈ ಕ್ಲಿಷ್ಟಕರ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಭಾಸ್ಕರ್ ಶೆಟ್ಟಿ ಕೊಲೆಯಾದ್ದು 2016ರ ಜು.28ರಂದು. ಆ.16ಕ್ಕೆ ಪ್ರಕರಣದ ತನಿಖೆ ಸಿಐಡಿ ಹಸ್ತಾಂತರವಾಗಿತ್ತು. ಸಿಐಡಿ ಡಿವೈಎಸ್‌ಪಿ ಎಸ್.ಟಿ.ಚಂದ್ರಶೇಖರ್ ನೇತೃತ್ವದ ತಂಡ ಉಡುಪಿಯಲ್ಲಿ ಮೂರು ತಿಂಗಳು ಬೀಡುಬಿಟ್ಟಿತ್ತು. ವೈಜ್ಞಾನಿಕ ಆಯಾಮದಲ್ಲಿ ತನಿಖೆ ಆರಂಭಿಸಿದ ಸಿಐಡಿ ತಂಡ ಭಾಸ್ಕರ್ ಶೆಟ್ಟಿ, ಮತ್ತಿತತರ ದೂರವಾಣಿ ಕರೆಗಳ ಜಾಡಿಹಿಡಿದರು. ಭಾಸ್ಕರ್ ಶೆಟ್ಟಿಯವರ ಕೊನೆಯ ಕರೆಯ ಟ್ರೇಸ್ ಮಾಡಿದಾಗ ಮೊದಲ ಮಹತ್ವದ ಸಾಕ್ಷೃ ಲಭಿಸಿತ್ತು. ಭಾಸ್ಕರ್ ಶೆಟ್ಟಿ ಆಸ್ತಿ ವೀಲುನಾಮೆ ಬರೆಸಿದ್ದ ವಕೀಲರ ಬಳಿಗೆ ತೆರಳಿದ ಅಧಿಕಾರಿಗಳು, ವೀಲುನಾಮೆ ಸಹಿತ ವಕೀಲರ ಹೇಳಿಕೆ ಪಡೆದರು. ನಿರಂಜನ್ ಭಟ್ ಮುಂಬೈಯಲ್ಲಿರುವ ಓರ್ವನನ್ನು ಸಂಪರ್ಕಿಸಿ ಗನ್ ಮತ್ತು ಕ್ಲೋರೊಫಾರ್ಮ್ ಬೇಡಿಕೆ ಇಟ್ಟಿದ್ದ ಸಂಗತಿಯೂ ಬೆಳಕಿಗೆ ಬಂತು. ಮುಂಬೈನ ವ್ಯಕ್ತಿ ಈ ಸಂಬಂಧ ನ್ಯಾಯಾಲಯದಲ್ಲಿ ಸಾಕ್ಷೃ ಹೇಳಿದ್ದರು.
ಹೋಟೆಲ್ ರೂಂನಲ್ಲಿ ಕೂದಲು ಸಿಕ್ಕಿತ್ತು!
ಸಿಐಡಿ ಅಧಿಕಾರಿಗಳು ಭಾಸ್ಕರ್ ಶೆಟ್ಟಿ ತಂಗಿದ್ದ ಹೋಟೆಲ್ ರೂಂ ಶೋಧಿಸಿದ್ದರು. ಫಾರೆನ್ಸಿಕ್ ತಜ್ಞರ ಸೂಕ್ಷ್ಮಶೋಧನೆಯಲ್ಲಿ ಕೂದಲು ಕಂಡುಬಂತು. ನಿರಂಜನ್ ಭಟ್‌ನ ಕಾರಿನಲ್ಲಿ ರಕ್ತದ ಕಲೆ ಮತ್ತು ನಂದಳಿಕೆಯ ಮನೆಯ ಸಮೀಪದ ಸಣ್ಣ ತೋಡಿನಲ್ಲಿ ರಕ್ತದ ಮಾದರಿಯೂ ಲಭಿಸಿತು. ನದಿಯೊಂದಿಗೆ ಸಿಕ್ಕ ಮೂಳೆಯ ಡಿಎನ್‌ಎ ಪರೀಕ್ಷೆ ನಡೆಸಿದಾಗ, ವರದಿ ಪಾಸಿಟಿವ್ ಬಂತು. ಅನಂತರ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ, ಸಹೋದರ ಸುರೇಶ್ ಶೆಟ್ಟಿ ಅವರ ಡಿಎನ್‌ಎಗೆ ಹೋಲಿಸಿ ಪರೀಕ್ಷೆ ನಡೆಸಲಾಯಿತು. ಈ ವರದಿಯೂ ಪಾಸಿಟಿವ್ ಆಗಿತ್ತು. ಇದು ನ್ಯಾಯಾಲಯದಲ್ಲಿ ಈ ಸಾಕ್ಷೃ ಪ್ರಮುಖವಾಗಿತ್ತು.
ಆರೋಪಿಗಳ ಮೊಬೈಲ್ ಲೊಕೇಶನ್
ಆರೋಪಿಗಳು ಆ ಸಂದರ್ಭ ಎಲ್ಲೆಲ್ಲಿ ಇದ್ದರು ಎಂಬುದನ್ನು ಸಿಐಟಿ ಅಧಿಕಾರಿಗಳು ಪತ್ತೆ ಮಾಡಿದ್ದು ಮೊಬೈಲ್ ಲೋಕೇಶನ್ ಮೂಲಕ. ಇಂದ್ರಾಳಿ ಮತ್ತು ಹೋಮಕುಂಡದಲ್ಲಿ ಶವ ಸುಟ್ಟ ನಂದಳಿಕೆಯಲ್ಲಿ ಆರೋಪಿಗಳ ಲೋಕೇಶನ್ ಪತ್ತೆಯಾಯಿತು. ಅಪರಾಧಿಗಳಿಗೆ ಶಿಕ್ಷೆ ದೊರಕಿಸಿಕೊಡುವಲ್ಲಿ ತನಿಖೆಯ ಈ ಅಂಶಗಳು ಪ್ರಮುಖವಾಗಿ ಪರಿಗಣಿಸಲ್ಪಟ್ಟಿದೆ. ಪ್ರಕರಣದಲ್ಲಿ 167 ಸಾಕ್ಷಿಗಳು, 1500 ಪುಟದ ಚಾರ್ಜ್‌ಶೀಟ್ ಸಿದ್ಧಪಡಿಸಿ ಸಿಐಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು. ಸಿಐಡಿ ಡಿಜಿಪಿ ಕಿಶೋರ್‌ಚಂದ್ರ, ಎಡಿಜಿಪಿ ಪ್ರತಾಪ್ ರೆಡ್ಡಿ, ಡಿಐಜಿ ಸೋನಿಯ ನಾರಂಗ್ ಮಾರ್ಗದರ್ಶನದಲ್ಲಿ ಸಿಐಡಿ ಎಸ್‌ಪಿ ರಾಜಪ್ಪ, ಎಡಾ ಮಾರ್ಟಿನ್, ಡಿವೈಎಸ್‌ಪಿ ಎಸ್.ಟಿ ಚಂದ್ರಶೇಖರ್ ನೇತೃತ್ವದ ತಂಡ ಈ ಕೇಸನ್ನು ಭೇದಿಸಿದ್ದಾರೆ.
ಸಿಐಡಿಗೆ ಇದು ಸವಾಲಿನ ಪ್ರಕರಣವಾಗಿತ್ತು. ಸಾಂದರ್ಭಿಕ ಮತ್ತು ವೈಜ್ಞಾನಿಕ ಸಾಕ್ಷಿಗಳಿಂದ ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ನಡೆಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಲಾಯಿತು. ಮೇಲಧಿಕಾರಿಗಳ ಸಹಕಾರ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತರಾಮ್ ಶೆಟ್ಟಿ ಅವರ ಶ್ರಮದಿಂದ ಯಶಸ್ಸು ಸಾಧ್ಯವಾಯಿತು.
-ಎಸ್.ಟಿ ಚಂದ್ರಶೇಖರ್, ಡಿವೈಎಸ್‌ಪಿ, ಸಿಐಡಿ