ದಸರೆಯೊಳಗೆ ಮೈಸೂರಿನಲ್ಲಿ ಆಪ್ ಪಕ್ಷ ಸಂಘಟಿಸಲು ಭಾಸ್ಕರ್ ರಾವ್ ಗಡುವು

Bhaskar Rao
Published on

ಮೈಸೂರು: ದಸರೆಯೊಳಗೆ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಗಡುವು ನೀಡಿರುವ ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್, ಕಾಲಾಹರಣ ಮಾಡಲು ರಾಜಕಾರಣಕ್ಕೆ ಬರುವವರಿಗೆ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ಪಕ್ಷದ ಮುಖಂಡರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಚಾಮುಂಡಿಪುರಂನಲ್ಲಿ ಆಮ್ ಆದ್ಮಿ ಪಾರ್ಟಿಯ ಕಚೇರಿ ಉದ್ಘಾಟಿಸಿ ನಂತರ ಜೆಎಲ್‌ಬಿ ರಸ್ತೆಯ ಆರಾಧ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣ, ಸಮಾಜ ಸೇವೆಯನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ಸಮಯ ಕಳೆಯುವುದಕೋಸ್ಕರ ಬರುವವರಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಬೇಡಿ. ಪಕ್ಷ ಸಂಘಟನೆ, ಸಮಾಜ ಸೇವೆಯ ತುಡಿತ ಇರುವವರಿಗೆ ಜವಾಬ್ದಾರಿ ನೀಡಿ. ಸಮಯ ಕಳೆಯಲು ಬರುವವರಿಗೆ ಜವಾಬ್ದಾರಿ ನೀಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ, ಅಂಥವರು ಮನೆಯಲ್ಲಿಯೇ ಇರಲಿ ಎಂದರು.

ಪಕ್ಷದ ಯುವ ಘಟಕ, ಮಹಿಳಾ ಘಟಕ ಸೇರಿದಂತೆ 10 ಘಟಕಗಳನ್ನು ಕೂಡಲೇ ರಚಿಸಿ ಅರ್ಹರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಬೇಕು. ದಸರೆಯೊಳಗೆ ನಾನು ಮತ್ತೊಮ್ಮೆ ಮೈಸೂರಿಗೆ ಆಗಮಿಸುತ್ತೇನೆ. ಅಷ್ಟರೊಳಗೆ ಪಕ್ಷ ಸದೃಢವಾಗಿ ಸಂಘಟಿಸುವ ಜವಾಬ್ದಾರಿ ಪಕ್ಷದ ಪದಾಧಿಕಾರಿಗಳ ಮೇಲಿದೆ. ಮೈಸೂರಿನಲ್ಲಿ ಪಕ್ಷ ಸಂಘಟನೆ ಸರಿಯಾಗಿ ನಡೆಯುತ್ತಿಲ್ಲ, ಕೇವಲ ಚರ್ಚೆಗಳು ಮಾತ್ರ ನಡೆಯುತ್ತಿದೆ. ಸಂಘಟನೆ ಬೆಳೆಯಬೇಕಾದರೆ ಎಲ್ಲರಿಗೂ ಜವಾಬ್ದಾರಿ ನೀಡಬೇಕು. ಮುಂದಿನ ಬಾರಿ ನಾನು ಬರುವಾಗ ಆರಾಧ್ಯ ಭವನದ ತುಂಬ ಕಾರ್ಯಕರ್ತರು ತುಂಬಿರುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net