

ಮಂಡ್ಯ: ಜಿ.ಎಂ ಜೈವಿಕ ಬೀಜಗಳ ಸಂಬಂಧ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಸಮಾಲೋಚನೆ ನಡೆಸಿ ಬೆಳೆ ಬೆಳೆಯುವ ಸಂಬಂಧ ತೀರ್ಮಾನ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಆದ್ದರಿಂದ ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತದ ಅಧ್ಯಕ್ಷ ಹಾಡ್ಯ ರಮೇಶ್ ಒತ್ತಾಯಿಸಿದರು.
ಜೈವಿಕ ತಂತ್ರಜ್ಞಾನದಿಂದ ಬೀಜಗಳನ್ನು ಮಾಡುವ ವಿಧಾನ ಅನೈಸರ್ಗಿಕವಾಗಿದ್ದು, ಇದರಿಂದ ಬೆಳೆ ಬೆಳೆಯುವ ಭೂಮಿಯ ಮೇಲು ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು. ಅಮೆರಿಕಾದಲ್ಲಿ ಈ ರೀತಿಯ ಬೀಜಗಳಿಂದ ಬೆಳೆ ಬೆಳೆಯಲಾಗುತ್ತಿದ್ದು, ಇದನ್ನು ಪ್ರಾಣಿಗಳಿಗೆ ನೀಡಲು ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ. ಸೇವನೆಗೆ ಯೋಗ್ಯವಲ್ಲದ ಬೀಜಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಈ ಹಿಂದೆಯೂ ಬಿಟಿ ಹತ್ತಿ ತಳಿಯನ್ನು ಪರಿಚಯ ಮಾಡಿದ್ದು, ಆ ತಳಿಯಿಂದ ಸಾಕಷ್ಟು ಅನಾಹುತಗಳು, ರೈತರು ನಷ್ಟ ಅನುಭವಿಸುವಂತಹ ಸಂಗತಿಗಳು ನಡೆದಿದೆ. ನಿರಂತರ ಹೋರಾಟದ ಫಲವಾಗಿ ಬಿಟಿ ಹತ್ತಿಯನ್ನು ಹಾಗೂ ಬಿಟಿ ಬದನೆಯನ್ನು ತಿರಸ್ಕರಿಸಿ ಹಿಮ್ಮೆಟ್ಟಿಸಲಾಯಿತು ಎಂದು ವಿವರಿಸಿದರು.
ಸಂಘದ ಪಣಕನಹಳ್ಳಿ ವೆಂಕಟೇಶ್, ಬೂದನೂರು ಅಪ್ಪಾಜಿ, ಪಾಪೇಗೌಡ, ಇಂದ್ರಮ್ಮ, ದುರ್ಗೇಶ್ ಇದ್ದರು.