ಮಕ್ಕಳಿದ್ದರೂ ಶಾಲೆ ಮುಚ್ಚಲು ಯತ್ನ : ಮಧ್ಯಾಹ್ನ ತನಕ ಜಗುಲಿಯಲ್ಲೇ ಕುಳಿತ ವಿದ್ಯಾರ್ಥಿಗಳು

bharath mata
ಅಧಿಕಾರಿಗಳು, ಪೊಲೀಸರು, ಮಕ್ಕಳ ಪಾಲಕರ ಸಮ್ಮುಖ ಸಮಾಲೋಚನಾ ಸಭೆ ನಡೆಸಿ, ಬಳಿಕ ಶಾಲೆಗೆ ಹಾಕಿದ್ದ ಬೀಗವನ್ನು ತೆಗೆಯಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಮಾಜಿ ಶಾಸಕ, ಸ್ವಾತಂತ್ರ್ಯ ಹೋರಾಟಗಾರ ಸಂಜೀವನಾಥ್ ಐಕಳ ಪ್ರಾರಂಭಿಸಿದ ಪುನರೂರು ಭಾರತ್ ಮಾತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಲು ಆಡಳಿತ ಮಂಡಳಿಮುಂದಾಗಿರುವುದಕ್ಕೆ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಿನ ಮೂಲ್ಕಿ ಶಾಸಕರಾಗಿದ್ದ ಸಂಜೀವನಾಥ ಐಕಳ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಭಾರತ್ ಮಾತಾ ಶಾಲೆಯನ್ನು 1956ರಲ್ಲಿ ಪ್ರಾರಂಭಿಸಿದ್ದು, ತಮ್ಮ ಮನೆಯಿಂದ ಬೆಂಚು, ಕುರ್ಚಿ, ಮನೆಯ ಹೆಂಚನ್ನು ತೆಗೆದು ಶಾಲೆಗೆ ಅರ್ಪಿಸಿದ್ದರು. ಬರುತ್ತಿದ್ದ ಸ್ವಲ್ಪ ವೇತನವನ್ನೂ ಶಾಲೆಗೆ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದರು.

ಕಳೆದ ಬಾರಿ, ಈ ಶಾಲೆಯಲ್ಲಿ 7ನೇ ತರಗತಿವರೆಗೆ 64 ಮಕ್ಕಳು ವಿದ್ಯಾಭ್ಯಾಸ ಮಾಡಿದ್ದರು. ಈ ಬಾರಿಯೂ 20 ಮಕ್ಕಳು ಒಂದನೇ ತರಗತಿಗೆ ಸೇರುವವರಿದ್ದರು. ಆದರೆ ಪ್ರಸ್ತುತ ಕಲಿಯುತ್ತಿದ್ದ ಮತ್ತು ಒಂದನೇ ತರಗತಿಗೆ ಸೇರಬಯಸುವ ಎಲ್ಲ ಮಕ್ಕಳ ಪಾಲಕರಿಗೆ ಆಡಳಿತ ಮಂಡಳಿಯವರು ಕರೆ ಮಾಡಿ ‘ಶಾಲೆ ಮುಚ್ಚುತ್ತಿದ್ದೇವೆ. ನಿಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಿ’ ಎಂದು ತಿಳಿಸಿದ್ದಾಗಿ ಮಕ್ಕಳ ಪಾಲಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಬುಧವಾರ ಶಾಲೆಗೆ ಬೀಗ ಹಾಕಿದ್ದ ಆಡಳಿತ ಮಂಡಳಿ, ಶಾಲೆಗೆ ಬಂದಿದ್ದ ಮಕ್ಕಳನ್ನು ಮಧ್ಯಾಹ್ನವರೆಗೆ ಜಗುಲಿಯಲ್ಲಿ ಕುಳ್ಳಿರಿಸಿದೆ. ಮಕ್ಕಳ ಮತ್ತು ಶಿಕ್ಷಕರ ಜವಾಬ್ದಾರಿ ನಾವೇ ನೋಡಿಕೊಳ್ಳುತ್ತೇವೆ ಎಂದು ಪಾಲಕರು ಲಿಖಿತವಾಗಿ ಭರವಸೆ ನೀಡಿದ ಬಳಿಕ ಮಧ್ಯಾಹ್ನ 12.15ಕ್ಕೆ ಬೀಗ ತೆರೆದು ಮಕ್ಕಳನ್ನು ಒಳ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net