ರಾಜ್ಯಸರ್ಕಾರದಿಂದ ರೈತರಿಗೆ ದ್ರೋಹ: ಕಿಸಾನ್ ಸಂಘದ ಪ್ರಾಂತೀಯ ಅಧ್ಯಕ್ಷ ರಮೇಶ್‌ರಾಜು ಟೀಕೆ

Bharatiya Kisan Sangha Press Conference Mandya
Published on

ಮಂಡ್ಯ: ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ಯಾವುದೇ ರೀತಿ ತಿದ್ದುಪಡಿ ತರಬಾರದೆಂದು ಒತ್ತಾಯಿಸಲು ರಾಜ್ಯ ಸರ್ಕಾರ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿರುವುದು ರೈತರು, ಜನತೆಗೆ ಮಾಡಿರುವ ದ್ರೋಹ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತೀಯ ಅಧ್ಯಕ್ಷ ರಮೇಶ್ ರಾಜು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆಯನ್ನು ವಿರೋಧಿಸಿದ ಸಲುವಾಗಿ ಕೇಂದ್ರ ಸರ್ಕಾರದ ತಿದ್ದುಪಡಿ ತರಲು ಮುಂದಾಗಿದೆ. ಇದರಿಂದಾಗಿ ವಕ್ಫ್ ಕಾಯ್ದೆಗೆ ಹಿನ್ನಡೆಯಾಗಿದೆ ಎಂದು ತಿಳಿದಿದ್ದೆವು. ಆದರೆ ರಾಜ್ಯ ಸರ್ಕಾರದ ನಿರ್ಣಯ ವಿಪರ್ಯಾಸ ಮೂಡಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯಸರ್ಕಾರ ಹಲವು ರೈತ ವಿರೋಧಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವುದೇ ರಾಜ್ಯ ಸರ್ಕಾರ ರೈತರ ಅನುಕೂಲಕರ ವ್ಯವಸ್ಥೆಗಳನ್ನು ಕಸಿದಿರಲಿಲ್ಲ. ಆದರೆ ಈ ಸರ್ಕಾರ ರೈತರನ್ನು ಕಡೆಗಣಿಸಿ, ವಕ್ಫ್ ಪರವಾಗಿ ನಿಂತಿದೆ. ವಕ್ಫ್ ಕಲಿಯುಗದ ಬಸ್ಮಾಸುರನಂತಿದ್ದು, ಅಷ್ಟು ಅಧಿಕಾರವನ್ನು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ತಿದ್ದುಪಡಿ ಮೂಲಕ ನೀಡಿದೆ ಎಂದರು.

ಕದಂಬ ಸೇನೆ ಸಂಸ್ಥಾಪಕ ಬೇಕ್ರಿ ರಮೇಶ್ ಮಾತನಾಡಿ, ಮಾ.22ರ ಕರ್ನಾಟಕ ಬಂದ್‌ಗೆ ವಕ್ಫ್ ವಿರೋಧಿ ರೈತ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತದೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಮಂಡ್ಯದವರೆಲ್ಲ ಛತ್ರಿ ಆಟವೆಂದು ಹೇಳಿಕೆ ನೀಡಿದ್ದು, ಇದಕ್ಕೆ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಕ್ಕೂಟದ ಅಪ್ಪಾಜಿ ಬೂದನೂರು, ಮೋಹನ್ ಚಿಕ್ಕಮಂಡ್ಯ, ಲಕ್ಷ್ಮೀ, ಪುಟ್ಟಮ್ಮ, ಹೊಳಲು ಶಿವಣ್ಣ, ಅಚ್ಯುತ, ದುರ್ಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net