ವಕ್ಫ್ ಕಾಯ್ದೆ ಅಂಗೀಕಾರ ರೈತರಿಗೆ ಜಯ: ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ರಮೇಶ್‌ರಾಜು ಸಂತಸ

Bharatiya Kisan Sangh press conference Mandya
Published on

ಮಂಡ್ಯ: ರೈತ ಹಾಗೂ ಸಂವಿಧಾನ ವಿರೋಧಿಯಾಗಿದ್ದ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಅಂಗೀಕರಿಸಿರುವುದು ದೇಶದ ರೈತರಿಗೆ ದೊರೆತ ಜಯ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ರಮೇಶ್‌ರಾಜು ಸಂತಸ ವ್ಯಕ್ತಪಡಿಸಿದರು.

ರೈತರು ಹಾಗೂ ಸಾರ್ವಜನಿಕರನ್ನು ಪೆಡಂಭೂತದಂತೆ ಕಾಡುತ್ತಿದ್ದ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇವೆ. ಈ ಕಾಯ್ದೆಗೆ ತಿದ್ದುಪಡಿ ತರಲು ಬಿಲ್ಲನ್ನು ಸಂಸತ್‌ನಲ್ಲಿ ಮಂಡಿಸಿದಾಗ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಿರೋಧಿಸಿವೆ. ಇಂತಹ ಪಕ್ಷಗಳು ರೈತರ ಪಕ್ಷವಾಗಿರಲು ಸಾಧ್ಯವೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಕ್ಫ್ ಕಾಯ್ದೆಗೆ ಶಕ್ತಿ ತುಂಬಿಸುವ ನಿಟ್ಟಿನಲ್ಲಿ ಮೂರ‌್ನಾಲ್ಕು ಬಾರಿ ತಿದ್ದುಪಡಿ ತಂದಿದೆ. ಮತಬ್ಯಾಂಕ್‌ಗಾಗಿ ಒಂದು ಕೋಮಿಗೆ ದೇಶವನ್ನು ಅಡವಿಟ್ಟು ರೈತರಿಗೆ ದ್ರೋಹ ಬಗೆದಿದೆ. ಮಾತ್ರವಲ್ಲದೆ ರಾಜ್ಯ ಸರ್ಕಾರವೂ ವಕ್ಫ್ ಕಾಯ್ದೆಗೆ ತಿದ್ದುಪಡಿ ತರದಂತೆ ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮುಂದಾಗಿತ್ತು. ಈ ಮೂಲಕ ರಾಜ್ಯ ಸರ್ಕಾರವೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ರೈತರು ಜಾಗೃತಗೊಳ್ಳಬೇಕಿದ್ದು, ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಕಳೆದ 20 ತಿಂಗಳಿನಲ್ಲಿ ಗ್ರಾಹಕರಿಗೆ ಹಾಲಿನ ದರ 9 ರೂ ಹೆಚ್ಚಿಸಿದೆ. ಅಂತೆಯೇ ಹಾಲು ಉತ್ಪಾದಕರಿಗೆ 4 ರೂ ಕಡಿತಗೊಳಿಸಿ, ಮತ್ತೇ 4 ರೂ ಹೆಚ್ಚಳ ಮಾಡಿ ರೈತರಿಗೆ ನೀಡುವುದಾಗಿ ಹೇಳುತ್ತಿದೆ. ಶಾಸಕರು ಹಾಗೂ ಸಚಿವರ ವೇತನ ಶೇ.50ರಷ್ಟು ಏರಿಸಿಕೊಂಡಿರುವ ರಾಜ್ಯಸರ್ಕಾರ, ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಚರ್ಚಿಸದಿರುವುದು ದುರಂತ ಎಂದರು.

ಜಿಲ್ಲಾಧ್ಯಕ್ಷ ಅಪ್ಪಾಜಿ ಹಳೆಬೂದನೂರು, ಶ್ರೀಧರ್, ರುದ್ರಪ್ಪ, ನಾರಾಯಣಸ್ವಾಮಿ, ನರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net