ಸೆ.21ರಿಂದ 27ರವರೆಗೆ ಬಲರಾಮ ಯಾತ್ರೆ: ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ಮಾಹಿತಿ

Bharatiya Kisan Sangh press conference
Published on

ಮಂಡ್ಯ: ಭಗವಾನ್ ಬಲರಾಮ ಜಯಂತಿ ಅಂಗವಾಗಿ ಭಾರತೀಯ ಕಿಸಾನ್ ಸಂಘದಿಂದ ಜಿಲ್ಲೆಯ ಏಳು ತಾಲೂಕಿನಲ್ಲಿ ಸೆ.21ರಿಂದ 27ರವರೆಗೆ ಬಲರಾಮ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ಹೇಳಿದರು.

ಭಾದ್ರಪದ ಷಷ್ಠಿ ದಿನವಾದ ಸೆ.21ರಂದು ದೇಶಾದ್ಯಂತ ಬಲರಾಮ ಜಯಂತಿ ಆಚರಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲೂ ಆಚರಣೆ ಮಾಡಿ ಯಾತ್ರೆಗೆ ಚಾಲನೆ ನೀಡಲಾಗುವುದು. ಕೆರೆಕಟ್ಟೆಗಳ ನಿರ್ಮಾಣದ ಮೂಲಕ ಯಮುನೆಯನ್ನು ಕೃಷಿಗೆ ಭೂಮಿಗೆ ಹರಿಸಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಬಲರಾಮ ಅವರನ್ನು ಭಾರತೀಯ ಕಿಸಾನ್ ಸಂಘ ನೇಗಿಲಯೋಗಿ ಮತ್ತು ನೀರಾವರಿ ಕ್ಷೇತ್ರದ ಆದರ್ಶ ಪುರುಷನಾಗಿ ಸ್ವೀಕರಿಸಿದೆ. ಹೀಗಾಗಿ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಲರಾಮ ಅವರು ಪ್ರತಿ ಫೋಟೋದಲ್ಲೂ ಒಂದು ಕೈಯಲ್ಲಿ ನೇಗಿಲು, ಮತ್ತೊಂದರಲ್ಲಿ ಒನಕೆ ಹಿಡಿದಿರುವುದನ್ನು ನಾವು ಗಮನಿಸಬಹುದು. ನೇಗಿಲು ಭೂಮಿ, ಬಿತ್ತನೆ ಕಾರ್ಯಯನ್ನು ಪ್ರತಿನಿಧಿಸಿದರೆ, ಒನಕೆಯು ಧಾನ್ಯದ ಸಂಕೇತವಾಗಿದೆ. ಹೀಗಾಗಿ ಬಲರಾಮರ ಜನ್ಮದಿನದ ಜತೆಗೆ ಪ್ರತಿ ವರ್ಷ ನಾಲ್ಕು ಪ್ರಮುಖ ದಿನಗಳನ್ನು ವಿಶೇಷವಾಗಿ ಆಚರಿಸುತ್ತಿದೆ. ಜ.26ರಂದು ಭಾರತ್ ಮಾತಾ ಪೂಜೆ, ಮಾ.4ರಂದು ಭಾರತೀಯ ಕಿಸಾನ್ ಸಂಘದ ಸ್ಥಾಪನಾ ದಿನ ಹಾಗೂ ಭಾದ್ರಪದ ಶುಕ್ಲಪಕ್ಷದ ಷಷ್ಠಿ ದಿನಂದು ಬಲರಾಮ ಜಯಂತಿ ಹಾಗೂ ಕಾರ್ತಿಕ ಮಾಸದ ಶುಕ್ಲಪಕ್ಷದ ಅಷ್ಟಮಿಯಂದು ಗೋಪಾಷ್ಠಮಿ ಆಚರಿಸಲಾಗುವುದು ಎಂದು ವಿವರಿಸಿದರು.

ಸಂಘದ ಪದಾಧಿಕಾರಿಗಲಾದ ಪಣಕನಹಳ್ಳಿ ವೆಂಕಟೇಶ್, ಗಾಣದಾಳು ನರಸಿಂಹ, ದುರ್ಗೇಶ್, ನಿರ್ಮಲಾ, ಅನಿಲ್‌ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net