

ಮಂಡ್ಯ: ಕಲಬುರಗಿ ಜಿಲ್ಲೆಯ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ರಚಿಸಿ ಆಂಧ್ರಪ್ರದೇಶದ ಬುದ್ದವನ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ ಜ.24ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ನಡೆಯಲಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಎಂ.ಸಿ.ಶಿವರಾಜ್ ತಿಳಿಸಿದರು.
ಸನ್ನತಿ ಪಂಚಶೀಲ ಪಾದಯಾತ್ರೆಯು ನಾಡಿನ ಬಿಕ್ಕು ಮತ್ತು ಬಿಕ್ಕುಣಿ ಸಂಘದ ಭಂತೆ ಭೋದಿದತ್ತ ಅವರ ನೇತೃತ್ವದಲ್ಲಿ ಜ.15ರಂದು ಪ್ರಾರಂಭಗೊಂಡಿತು. ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚರಿಸಿ ಧಮ್ಮ ಸಂದೇಶ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾದಯಾತ್ರೆ ಜ.22ರಂದು ಪೂರ್ಣಗೊಳ್ಳಲಿದೆ. 23ರಂದು ಯಶವಂತಪುರ ಮಾರ್ಗವಾಗಿ ಸದಾಶಿವನಗರದ ನಾಗಸೇನ ಬುದ್ಧ ವಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡಲಿದೆ. 24ರಂದು ಬೆಳಗ್ಗೆ 9ಗಂಟೆಗೆ ವಿಹಾರ ಪ್ರಾರಂಭಿಸಿ ಬೆಂಗಳೂರಿನ ಸ್ವಾತಂತ್ರೃ ಉದ್ಯಾನ ತಲುಪಲಿದೆ. 10 ಸಾವಿರಕ್ಕೂ ಹೆಚ್ಚು ಜನ ಶಾಂತಿಪೂರ್ವಕವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಸಮಾರೋಪಗೊಳ್ಳಲಿದೆ. ಈ ಸಮಯದಲ್ಲಿ ಬೌದ್ಧ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಗಮನಕ್ಕೆ ತರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮನವಿ ಪತ್ರ ಸ್ವೀಕರಿಸಲಿದ್ದಾರೆ. ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಲು ಕೋರಲಾಗುವುದು ಎಂದು ವಿವರಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಪ್ರೊ.ವೆಂಕಟೇಶ್, ಸಿದ್ದಯ್ಯ, ಶಿವಕುಮಾರ್, ಕೆ.ಶಿವಾನಂದ್, ವೆಂಕಟಾಚಲಯ್ಯ, ಜಯರಾಂ, ಎಸ್.ಪಿ.ನಾರಾಯಣಸ್ವಾಮಿ ಇದ್ದರು.