

ಹುಬ್ಬಳ್ಳಿ: ಇಲ್ಲಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವತಿಯಿಂದ ಕುಮಾರಿ ಪ್ರಶಸ್ತಿ ಆಡೂರ ಇವರ ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಅ. 18ರಂದು ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್ಟ ಅವರಲ್ಲಿ ತರಬೇತಿ ಪಡೆದಿರುವ ಪ್ರಶಸ್ತಿ ಇವಳು ಅಂದು ಪುಷ್ಪಾಂಜಲಿ, ಅಲಾರಿಪು, ಶಿವಸ್ತುತಿ, ಕೃಷ್ಣಸ್ತುತಿ, ವರ್ಣ, ತಿಲ್ಲಾನ ಮತ್ತು ನೃತ್ಯರೂಪಕ ಮೇನಕಾ ಮುಂತಾದ ನೃತ್ಯಗಳನ್ನು ಪ್ರದರ್ಶನ ನೀಡುವರು. ಗುರು ಡಾ. ಸಹನಾ ಅವರಿಗೆ ಗುರುವಂದನೆ ಸಲ್ಲಿಸುವರು ಎಂದರು.
ಹಿಮ್ಮೇಳದಲ್ಲಿ ಡಾ. ಸಹನಾ ಭಟ್ಟ, ವಿದ್ವಾನ್ ಬಾಲಸುಬ್ರಮಣ್ಯ ಶರ್ಮ, ವಿದ್ವಾನ್ ಪಂಚಮ ಉಪಾಧ್ಯಾಯ, ವಿದ್ಯಾನ್ ಅರುಣ ಕುಮಾರ ಭಾಗವಹಿಸುವರು.
ಖ್ಯಾತ ಬರಹಗಾರ ಪ್ರಶಾಂತ ಆಡೂರ ಹಾಗೂ ಪ್ರೇರಣಾ ಅವರ ಪುತ್ರಿ ಪ್ರಶಸ್ತಿ ಇವರು ಪಿಯುಸಿ ಕಾಮರ್ಸ್ ಅಧ್ಯಯನ ಮಾಡಿದ್ದು, 10 ವರ್ಷದಿಂದ ಭರತನಾಟ್ಯದಲ್ಲಿ ಅಭ್ಯಾಸ ಮಾಡಿದ್ದಾಳೆ. ಭರತನಾಟ್ಯ ಸೀನಿಯರ್ ಪರೀಕ್ಷೆ ತೇರ್ಗಡೆಯಾಗಿದ್ದಾಳೆ ಎಂದು ತಿಳಿಸಿದರು.
ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್. ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ, ಸೇವಾ ಭಾರತಿ ಕಾರ್ಯದರ್ಶಿ ಡಾ. ರು ಅಕಮಂಚಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪ್ರಶಸ್ತಿ ಆಡೂರ, ವಿದುಷಿ ಸುಷ್ಮಾ ಕೊಂಗಿ ಗೋಷ್ಠಿಯಲ್ಲಿದ್ದರು.