

ಮಂಗಳೂರು: ಭಾರತ ಸೇವಾದಳ 2022-27 ಅವಧಿಗೆ ನೂತನವಾಗಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎಸ್. ಬಿ. ಜಯರಾಮ್ ರೈ ಮತ್ತು ಇತರ ಪದಾಧಿಕಾರಿಗಳು ಹಾಗೂ ವಿವಿಧ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಭಿನಂದನ ಕಾರ್ಯಕ್ರಮ ಗುರುವಾರ ಜಿಲ್ಲಾ ಸಹಕಾರಿ ಬ್ಯಾಂಕ್‌ಸಭಾಂಗಣದಲ್ಲಿ ನಡೆಯಿತು.
ಕೇಂದ್ರ ಸಮಿತಿ ಸದಸ್ಯ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಅವರು ನೂತನ ಅಧ್ಯಕ್ಷ ಎಸ್.ಬಿ. ಜಯರಾಮ್ ರೈ ಅವರನ್ನು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಯರಾಮ್ ರೈ, ಸೇವಾದಳದಲ್ಲಿ ಹಲವು ಹಿರಿಯ ಪದಾಧಿಕಾರಿಗಳು ಇದ್ದಾರೆ. ಪ್ರತಿಯೊಬ್ಬರ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಸೇವಾದಳವನ್ನು ಬಲ ಪಡಿಸಲಾಗುವುದು. ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಈಗಾಗಲೇ ಕೇಂದ್ರ ಸಮಿತಿಯಿಂದ ನಿರ್ದೇಶನ ಬಂದಿರುತ್ತದೆ. ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿಗಳ ನೆರವಿನಿಂದ ಕಾರ್ಯಗತಗೊಳಿಸಲಾಗುವುದು. ಸೇವಾದಳದ ಜಿಲ್ಲಾ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಕೇಂದ್ರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಸೇವಾದಳದ ಉಪಾಧ್ಯಕ್ಷ ಸುಧಾಕರ್ ರೈ, ಖಜಾಂಜಿ ಸದಾಶಿವ ಭಟ್ ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಟಿ. ಕೆ. ಸುಧೀರ್ ಸ್ವಾಗತಿಸಿ, ರಾಘವೇಂದ್ರ ರಾವ್ ವಂದಿಸಿದರು. ಮುಖ್ಯ ಸಂಘಟಕ ಮಂಜೇಗೌಡ ಕಾರ್ಯಕ್ರಮ ನಿರೂಪಿಸಿದರು.