ಭರತನಾಟ್ಯದಲ್ಲಿ ದಿಶಿಕಾ ಸಾಧನೆ

bharatha natya
Published on

ಮಡಿಕೇರಿ:

ಪೊನ್ನಂಪೇಟೆಯ ಸಂತ ಅಂಥೋನಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಿ. ಎಚ್. ದಿಶಿಕಾ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ ಪ್ರಾವೇಶಿಕ ಪೂರ್ಣ ಹಂತದ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.

ಭರತನಾಟ್ಯದಲ್ಲಿ ಅಪ್ರತಿಮ ಸಾಧನೆ ತೋರುತ್ತಿರುವ ಈಕೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದು ಅತೀ ಎಳೆಯ ವಯಸ್ಸಿನಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ಮಂತ್ರಾಲಯ, ಕಟೀಲು, ಉಡುಪಿ, ಕೇರಳದ ಕಣ್ಣೂರು, ಗುರುವಾಯೂರ, ತಮಿಳುನಾಡಿನ ವೆಲ್ಲೂರು, ದಸರಾ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ಹೀಗೆ 80ಕ್ಕೂ ಹೆಚ್ಚು ಪ್ರತಿಷ್ಠಿ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ.

2023 ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೆಂಗಳೂರು ಬಾಲಭವನ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದಾಳೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಈಕೆ ಮಾಡಿರುವ ಅಪ್ರತಿಮ ಸಾಧನೆ ಗುರುತಿಸಿ ಕೊಡಗು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾಳೆ. ಈಕೆ ಪೊನ್ನಂಪೇಟೆಯ ನಾಟ್ಯಸಂಕಲ್ಪ ನೃತ್ಯ ಕಲಾಶಾಲೆಯ ಪ್ರೇಕ್ಷಾ ಭಟ್ ಬಳಿ ಕಳೆದ 8 ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದು, ಪೊನ್ನಂಪೇಟೆಯ ಆಟೋ ಚಾಲಕ ಚಿಣ್ಣೀರ ಹರೀಶ್ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net