ದ.ಕ. ಜಿಲ್ಲೆಯ ಆದಾಯದಿಂದ ಜನರಿಗೆ ಗ್ಯಾರಂಟಿ : ಡಿಕೆಶಿಗೆ ಡಾ.ಭರತ್ ಶೆಟ್ಟಿ ತಿರುಗೇಟು

Gur_Bharath Shetty
Published on

ಗುರುಪುರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಯಾಗುವ ಮುಂಚೆಯೂ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ನೆಮ್ಮದಿ ಮತ್ತು ಉತ್ತಮ ಜೀವನ ನಡೆಸುತ್ತಾ ಬಂದಿದ್ದಾರೆ. ಬೆಂಗಳೂರು ಜಿಲ್ಲೆಯ ಬಳಿಕ ದಕ್ಷಿಣ ಕನ್ನಡ ಜಿಡಿಪಿ ರೇಟಿಂಗ್‌ನಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ನಿಮ್ಮ ಗ್ಯಾರಂಟಿ ಭಾಗ್ಯದಿಂದಲೇ ಜನ ಬದುಕುತ್ತಿದ್ದಾರೆ ಎಂದು ನೀವು ತಿಳಿದುಕೊಂಡಿದ್ದರೆ ನಿಮ್ಮಂತಹ ಮೂರ್ಖರು ಬೇರೆ ಯಾರೂ ಇಲ್ಲ. ಈಗೇನಾದರೂ ಚುನಾವಣೆ ನಡೆದರೆ 20 ಸೀಟು ಪಡೆಯುವುದೂ ಕಷ್ಟ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ತಿರುಗೇಟು ನೀಡಿದರು.

ಕಾವೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಜನರು ಗ್ಯಾರಂಟಿ ಭಾಗ್ಯ ಅನುಭವಿಸುತ್ತಿದ್ದಾರೆ. ಆದರೆ ಚುನಾವಣೆ ಬಂದಾಗ ಮುಖ ಬೇರೆಡೆಗೆ ತಿರುಗಿಸುತ್ತಾರೆ ಎಂದು ಡಿಕೆಶಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದು, ಇದು ಅವರ ಓಟ್ ಬ್ಯಾಂಕ್ ಮಾತು. ಜನರು ನಿಮ್ಮಲ್ಲಿ ಗ್ಯಾರಂಟಿ ಭಾಗ್ಯ ಕೇಳಿಲ್ಲ. ಓಟಿಗಾಗಿ ಜನಪ್ರಿಯ ಪ್ರಣಾಳಿಕೆ ಘೋಷಿಸಿ ಈಗ ಜನರ ವಿರುದ್ಧವೇ ಮಾತನಾಡುತ್ತಿದ್ದೀರಿ. ಇದರಿಂದ ನಿಮ್ಮ ಓಟ್ ಡೀಲಿಂಗ್ ಮನಃಸ್ಥಿತಿ ವ್ಯಕ್ತವಾಗುತ್ತಿದೆ ಎಂದರು.

ಗ್ಯಾರಂಟಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ದಕ್ಷಿಣ ಕನ್ನಡ ಜಿಲ್ಲೆಯ ಮಂದಿಯನ್ನು ಕನಿಷ್ಠವಾಗಿ ನೋಡುವ ಅಗತ್ಯವಿಲ್ಲ. ಮೊದಲು ಜಿಲ್ಲೆಯಿಂದ ಸರ್ಕಾರಕ್ಕೆ ಎಷ್ಟು ಲಾಭವಿದೆ ಎಂಬುದನ್ನು ಗ್ರಹಿಸಿಕೊಳ್ಳಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲೆಸೆದರು.

ಜನರಿಗೆ ಹೊಟ್ಟೆಗಿಲ್ಲ ಎಂದು ಭಾವಿಸಬೇಡಿ

ಜನರು ಹೊಟ್ಟೆಗಿಲ್ಲದೆ ಗ್ಯಾರಂಟಿ ಭಾಗ್ಯ ಪಡೆಯುತ್ತಿದ್ದಾರೆ ಎಂದು ನೀವು ತಿಳಿದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಗ್ಯಾರಂಟಿ ಮೂರ‌್ನಾಲ್ಕು ತಿಂಗಳಿಗೊಮ್ಮೆ ಸಿಗುತ್ತಿದೆ. ಸರ್ಕಾರವು ಜನರ ತೆರಿಗೆಯಿಂದಲೇ ಇಂತಹ ಸೌಲಭ್ಯ ವಾಪಸ್ ನೀಡುತ್ತಿದೆ. ಉದ್ಯೋಗ ಸೃಷ್ಟಿ ಮಾಡಿಲ್ಲ. ಐಟಿ ಕಂಪನಿ ತರಲು ಶಕ್ತಿ ಇಲ್ಲ. ಸರ್ಕಾರದಿಂದ ಇವೆಲ್ಲ ಯಾವಾಗ ಸಾಧ್ಯವಾಗುವುದು ? ಅಪರಾಧ, ಕೊಲೆ ಹೆಚ್ಚಾಗುತ್ತಿದೆ. ಸರ್ಕಾರದ ವೈಫಲ್ಯದಿಂದ ಹತಾಶೆಗೊಂಡ ಕಾಂಗ್ರೆಸ್ ನಾಯಕರು ಮನಸ್ಸಿಗೆ ತೋಚಿದ ಹೇಳಿಕೆ ನೀಡುತ್ತಿದ್ದಾರೆ ಎಂದು ಡಾ.ಭರತ್ ಶೆಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net