

ಬೆಂಗಳೂರು: ಬೆಲೆ ಏರಿಕೆಯ ಸಮಸ್ಯೆ ನಿಯಂತ್ರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಬೆಂಗಳೂರಿನಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಧಾನ್ಯಗಳ ವಿತರಣೆ ಆರಂಭಿಸಿದೆ. ಬುಧವಾರ (ಅ.30)ದಿಂದ ಉತ್ಪನ್ನಗಳು ಲಭ್ಯವಾಗಲಿವೆ.
ಈ ಮೂಲಕ ಈ ಬಾರಿಯ ದೀಪಾವಳಿ ಹಬ್ಬ ಗ್ರಾಹಕರ ಪಾಲಿಗೆ ಇನ್ನಷ್ಟು ಸಿಹಿಯಾಗಿರಲಿದೆ. ಯೋಜನೆ ಅಡಿಯಲ್ಲಿ ಅಕ್ಕಿ 34 ರೂ., ಗೋದಿ ಹಿಟ್ಟು 30 ರೂ., ಕಡಲೆ ಬೇಳೆ 70 ರೂ., ಹೆಸರು ಬೇಳೆ 107 ರೂಪಾಯಿಗೆ ಮಾರಾಟ ವಿತರಿಸಲಾಗುತ್ತಿದೆ. ಈ ಮೂಲಕ ಬೆಂಗಳೂರಿಗರಿಗೆ ಅಗ್ಗದ ದರದಲ್ಲಿ ಉತ್ತಮ ದರ್ಜೆಯ ಆಹಾರ ಪದಾರ್ಥಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಈ ಎಲ್ಲಾ ಉತ್ಪನ್ನಗಳು ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಲಭ್ಯವಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ನಾಗರಿಕ ಪೂರೈಕೆ ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ, ಸಚಿವಾಲಯದ ರಾಜ್ಯ ಸಚಿವೆ ನಿಮುಬೆನ್ ಜಯಂತಿ ಬಾಯಿ ಬಾಂಬಾನೀಯ ಹಾಗೂ ಕೇಂದ್ರ ರಾಜ್ಯ ಸಚಿವ ಬಿ.ಎಲ್.ವರ್ಮ ಅವರ ಆದೇಶದಂತೆ ಬೆಂಗಳೂರಿನಲ್ಲಿ ವಿತರಣೆ ಆರಂಭವಾಗಿದೆ.