

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಮಂಗಳವಾರ ನೀಡಿದ್ದ ಭಾರತ್ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜಕೀಯ ಪಕ್ಷಗಳು ನಗರದಲ್ಲಿ ಪ್ರತಿಭಟನೆ ನಡೆಸಿದರೆ, ಹಿರೇಮಗಳೂರಿನಲ್ಲಿ ರಸ್ತೆ ತಡೆ ನಡೆಸಿದ ರೈತ ಸಂಘ ಹಸಿರುಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್‍ಪಿ, ಸಿಪಿಐಎಂಎಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷ ಪ್ರಗತಿಪರ ಮುಖಂಡರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಬೆಳಗ್ಗೆ 7ಕ್ಕೆ ಹನುಮಂತಪ್ಪ ವೃತ್ತ, ಮಾರ್ಕೆಟ್ ರಸ್ತೆ, ಆಜಾದ್ ಪಾರ್ಕ್, ಎಂಜಿ ರಸ್ತೆ, ಐಜಿ ರಸ್ತೆಗಳಲ್ಲಿ ಸಾಗಿ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಿದರು. ಮಾರ್ಕೆಟ್ ರಸ್ತೆ, ಎಪಿಎಂಸಿಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರಿಗಳು ಎಂದಿನಂತೆ ವ್ಯಾಪಾರಕ್ಕೆ ಮುಂದಾದರು.
ಒತ್ತಾಯಪೂರ್ವಕ ಬಂದ್‍ಗೆ ತಡೆ
ಎಂಜಿ ರಸ್ತೆಯಲ್ಲಿ ಬಾಗಿಲು ತೆರೆದಿದ್ದ ಹೋಟೆಲ್‍ವೊಂದರ ಬಳಿ ಪ್ರತಿಭಟನಾಕಾರರು ತೆರಳಿ ಮುಚ್ಚುವಂತೆ ಹೇಳಿದಾಗ ಪೊಲೀಸರು ಮಧ್ಯಪ್ರವೇಶಿಸಿ ಒತ್ತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ. ಸ್ವಯಂ ಪ್ರೇರಿತವಾಗಿ ಮಾಡಿದರೆ ಅಭ್ಯಂತರವಿಲ್ಲ ಎಂದಾಗ ಧಿಕ್ಕಾರ ಕೂಗಿ ಹಿಂತಿರುಗಿದರು. ಮಧ್ಯಾಹ್ನ ಹನುಮಂತಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಂಜಿ ರಸ್ತೆಯಲ್ಲಿ ಮೆರವಣಿಗೆ ವೇಳೆ ಬಾಗಿಲು ತೆರೆದಿದ್ದ ಅಂಗಡಿ ಮಾಲೀಕನಿಗೆ ಬಾಗಿಲು ಮುಚ್ಚುವಂತೆ ಹೇಳಿದಾಗ ನಿರಾಕರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ದಾರಿಯುದ್ದಕ್ಕೂ ಮೆರವಣಿಗೆ ಆಗಮಿಸುವಾಗ ಅಂಗಡಿ ಶಟರ್ ಗಳನ್ನು ಎಳೆಯುತ್ತಿದ್ದವರು ಬಂದ್‍ಪರ ಕಾರ್ಯಕರ್ತರು ಅತ್ತ ಸಾಗುತ್ತಿದ್ದಂತೆ ಬಾಗಿಲು ತೆರೆಯುತ್ತಿದ್ದರು.ಮೆರವಣಿಗೆ ಮುಗಿದ ಬಳಿಕ ರಾಜಕೀಯ ಪಕ್ಷಗಳು ಮತ್ತಿತರ ಸಂಘಟನೆಗಳ ಪ್ರತಿಭಟನಾ ಸಭೆ ನಡೆಯಿತು.
ಎಂದಿನಂತೆ ವ್ಯಾಪಾರ-ವಹಿವಾಟು
ರೈತರು, ವರ್ತಕರು, ವ್ಯಾಪಾರಸ್ಥರು ಬೆಳಗಿನಿಂದಲೆ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ನಡೆಸಿದರು. ಹೊರಗಿನಿಂದ ವಾಹನಗಳಲ್ಲಿ ಬಂದ ತರಕಾರಿಗಳನ್ನು ಲೋಡ್-ಅನ್‍ಲೋಡ್ ಮಾಡಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ಮಾರ್ಕೆಟ್ ರಸ್ತೆ, ಬಸವನಗುಡಿ ವೃತ್ತದ ಎದುರು ಹಾಗೂ ತಳ್ಳುವ ಗಾಡಿ, ಬೀದಿ ಬದಿಗಳಲ್ಲಿ ಹಣ್ಣು, ತರಕಾರಿ ಅಂಗಡಿಗಳ ವ್ಯಾಪಾರಕ್ಕೆ ಯಾವುದೆ ಅಡಚಣೆಯಾಗಲಿಲ್ಲ. ನಗರದ ಅಂಗಡಿ ಮುಂಗಟ್ಟುಗಳು ಸಹ ಕೆಲ ಸಮಯ ಅಂಗಡಿ ಮುಚ್ಚಿದಂತಿದ್ದು, ಅನಂತರ ತೆರೆದು ವಹಿವಾಟು ನಡೆಸಿದವು. ಹೂವು, ಹಣ್ಣು, ಹಾಲು, ಔಷಧಿ ಅಂಗಡಿಗಳ ವ್ಯವಹಾರ ಅಬಾಧಿತವಾಗಿದ್ದವು.
ವಾಹನ ಸಂಚಾರ ಸುಗಮ
ಪ್ರಯಾಣಿಕರಿಗೆ ಯಾವುದೇ ಅಡಚಣೆ ಇಲ್ಲದಂತೆ ಕೆಎಸ್‍ಆರ್‍ಟಿಸಿ ಬಸ್, ಆಟೋ, ಟ್ಯಾಕ್ಸಿ ವಾಹನಗಳು ಸಾಗಿ ಲಾರಿ ಸೇರಿದಂತೆ ಖಾಸಗಿ ವಾಹನ ಸಂಚಾರ ಎಂದಿನಂತೆ ಸುಗಮವಾಗಿತ್ತು. ಪ್ರಯಾಣಿಕರು ಹೊರ ಊರುಗಳಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದು ಕಂಡುಬಂತು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ಬ್ಯಾಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಎಂದಿನಂತಿತ್ತು.