

ಹುಬ್ಬಳ್ಳಿ : ಮಯೂರ ನೃತ್ಯ ಅಕಾಡೆಮಿಯ ವಿದ್ಯಾರ್ಥಿನಿಯರಾದ ರಮ್ಯಾ ದ್ಯಾವಣ್ಣವರ ಹಾಗೂ ಶ್ರಾವಣಿ ವಿಶ್ವಕರ್ಮ ಅವರ ರಂಗ ಪ್ರವೇಶ ಕಾರ್ಯಕ್ರಮ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಅ. 4ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿಯ ಸಂಸ್ಥಾಪಕಿ, ಕಲಾವಿದೆ ಹೇಮಾ ವಾಘಮೋಡೆ, ನೃತ್ಯ, ಸಂಗೀತ, ಭಾವಗೀತೆ, ಭಜನ, ಸಂಗೀತ ವಾದ್ಯಮೇಳ, ನಾಟಕೀಯ ಅಭಿವ್ಯಕ್ತಿ ಹಾಗೂ ಇನ್ನಿತರ ಕಲಾರೂಪಗಳನ್ನು ಪ್ರಸ್ತುತಪಡಿಸಲಾಗುವುದು ಎಂದರು.
ರಂಗಪ್ರವೇಶ ಕಾರ್ಯಕ್ರಮದ ನಟುವಾಂಗದಲ್ಲಿ ವಿದುಷಿ ಹೇಮಾ ವಾಘಮೋಡೆ, ಸಂಗೀತದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ವ, ಮೃದಂಗದಲ್ಲಿ ವಿದ್ವಾನ್ ಪಂಚಮ ಉಪಾಧ್ಯಾಯ, ಬಾನ್ಸುರಿಯಲ್ಲಿ ವಿದ್ವಾನ್ ರಘುಸಿಂಹ ಎ.ಎನ್., ರಿದಂ ಪ್ಯಾಡ್ನಲ್ಲಿ ವಿದ್ವಾನ ಡಿ. ಅರುಣಕುಮಾರ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ನಗರದ ನಿವಾಸಿ ಉಮೇಶ ಹಾಗೂ ಜಯಶ್ರೀ ದ್ಯಾವಣ್ಣವರ ಮಗಳಾದ ರಮ್ಯಾ ಅವರು ಪ್ರಸ್ತುತ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಸಿಎ 3 ನೇ ಸೆಮಿಸ್ಟರ್ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದರು.
ವಿದ್ಯಾರ್ಥಿನಿ ಶ್ರಾವಣಿ ಅವರು ಸಂಗೀತಾ ಹಾಗೂ ವಾಸುದೇವಚಾರ ಅವರ ಸುಪುತ್ರಿಯಾಗಿದ್ದು, ಕೆಎಲ್ಇ ಸಂಸ್ಥೆ ಬಿವಿಬಿ ಕಾಲೇಜ್ನಲ್ಲಿ ಬಿಟಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಲ್ಲಿ ಮಂಡಳ ಮಧ್ಯಮ ಪೂರ್ಣ ಪರೀಕ್ಷೆ ಹಾಗೂ ಕರ್ನಾಟಕ ವಿವಿ ನಡೆಸುವ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತೀರ್ಣಳಾಗಿದ್ದಾಳೆ. ಇಬ್ಬರೂ ವಿದ್ಯಾರ್ಥಿನಿಯರು ಕಳೆದ 6 ತಿಂಗಳಿನಿಂದ ರಂಗ ಪ್ರವೇಶ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನೃತ್ಯ ಅಕಾಡೆಮಿಯಲ್ಲಿ 800 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇದುವರೆಗೆ 12 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದು, ಈಗ ಇಬ್ಬರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಕಾಡೆಮಿಯ ದಿನೇಶ ವಾಘಮೋಡೆ, ಉಮೇಶ ದ್ಯಾವಣ್ಣವರ, ಸಂಗೀತಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.