

ಮಂಡ್ಯ: ಭರತನಾಟ್ಯ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ. ಶಿಲ್ಪಕಲೆ, ಸಂಗೀತ, ನೃತ್ಯ ಮತ್ತು ಸಾಹಿತ್ಯ ಕಲೆಯನ್ನು ಭಗವಂತನೇ ತಿಳಿಸಿಕೊಟ್ಟಿರುವುದು. ಹಾಗಾಗಿ ಇದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ನಟರಾಜ ಕಲಾನಿಕೇತನ ಸಂಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್.ಐಯ್ಯರ್ ಸಲಹೆ ನೀಡಿದರು.
ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ನಂದಿಕೇಶ್ವರ ಭರತನಾಟ್ಯ ಕಲಾಶಾಲೆ ವತಿಯಿಂದ ಆಯೋಜಿಸಿದ್ದ ಭರತನಾಟ್ಯ ಕಲಾವಿದೆ ಹರ್ಷಿತಾ ನಾಗೇಶ್ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭರತನಾಟ್ಯ ರಂಗಪ್ರವೇಶದ ಪ್ರದರ್ಶನವು ಶಿವನ ಸ್ವರೂಪದಂತೆ ಕಂಗೊಳಿಸುತ್ತದೆ. ಅದಕ್ಕಾಗಿ ಕಲಾವಿದರು ಎಷ್ಟು ಶ್ರಮ ಪಟ್ಟಿರುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಭರತನಾಟ್ಯ ಕಲಿಕೆಗೆ ಕಳುಹಿಸಬೇಕು. ಈ ಕಲೆಯನ್ನು ಒಂದು ವಿಷಯವಾಗಿ ತೆಗೆದುಕೊಳ್ಳಬೇಕು. ಗಣಿತ ವಿಷಯದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಭರತ ನಾಟ್ಯ ಕಲೆ ತರಬೇತಿಗೆ ಹೋದರೆ ಅವರು ಚುರುಕಾಗುತ್ತಾರೆ ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಮಾತನಾಡಿ, ರಂಗಪ್ರವೇಶದಿಂದ ಹರ್ಷಿತಾ ಅವರ ಭವಿಷ್ಯವು ಭರತನಾಟ್ಯ ಕಲೆಯಲ್ಲಿ ಉಜ್ವಲವಾಗಿರಲಿ. ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಭರತನಾಟ್ಯ ತರಬೇತಿ ನೀಡಲಿ. ಈ ವರ್ಷದಿಂದ ಇಲಾಖೆಯು ಕಲಾಪ್ರತಿಭೋತ್ಸವ ಎನ್ನುವ ಕಾರ್ಯಕ್ರಮ ತರುತ್ತಿದೆ. ವಯಸಿಗೆ ತಕ್ಕಂತಹ ಪ್ರದರ್ಶನ ಇರಲಿದೆ. ಜಿಲ್ಲಾ, ತಾಲೂಕು ಮಟ್ಟದ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.
ನೃತ್ಯಗಂಗೋತ್ರಿ ನಿರ್ದೇಶಕ ಎ.ಎನ್.ಸುಧೀರ್‌ಕುಮಾರ್, ನಂದಿಕೇಶ್ವರ ಭರತನಾಟ್ಯ ಕಲಾಶಾಲೆ ಮುಖ್ಯಸ್ಥೆ ವಿದುಷಿ ಕೆ.ಎಸ್.ಶೈಲಾ, ಸುನಂದಾ, ನಾಗೇಶ್ ಇದ್ದರು. ಇದೇ ವೇಳೆ ಹರ್ಷಿತಾ ನಾಗೇಶ್ ಅವರು ಹಲವು ಆಯಾಮದ ಕಲಾ ಪ್ರದರ್ಶನ ನೀಡಿದರು.