

ಮೈಸೂರು: ಆಧುನಿಕ ಕಾಲದಲ್ಲಿ ಭರತನಾಟ್ಯವನ್ನು ಯಾರು ಕಲಿಯುತ್ತಾರೆ ಎಂಬ ತಿರಸ್ಕಾರ ಭಾವ ಈಗಲೂ ಇದೆ ಎಂದು ಬೆಂಗಳೂರಿನ ಶ್ರೀ ರವಿಶಂಕರ ವಿದ್ಯಾಮಂದಿರದ ಪ್ರಾಂಶುಪಾಲೆ ಜಿ.ಗಾಯತ್ರಿ ಬೇಸರ ವ್ಯಕ್ತಪಡಿಸಿದರು.
ಸುವರ್ಣಮ್ಮನವರ ಸ್ಮರಣಾರ್ಥ ಲಯಾಭಿನಯ ಸಂಸ್ಥೆಯಿಂದ ಜಗನ್ಮೋಹನ ಅರಮನೆಯ ಸಭಾಂಗಣಗದಲ್ಲಿ ಶನಿವಾರ ಸಂಜೆ ಸುವರ್ಣ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭರತನಾಟ್ಯವನ್ನು ಈಗ ಯಾರು ಕಲಿಯುತ್ತಾರೆ ಎಂದು ಮೂಗು ಮುರಿಯುವ ಜನರಿಗೆ ಏನು ಕಡಿಮೆ ಇಲ್ಲ. ಯಕ್ಷಗಾನಕ್ಕೂ ಇದೇ ರೀತಿ ನಕಾರಾತ್ಮಕ ಭಾವ ಇದೆ. ನಾನು ಮೊದಲು ಯಕ್ಷಗಾನ ತರಗತಿ ಆರಂಭಿಸಿದೆ. ಆಗ ಅನೇಕರು ಈಗ ಯಾರು ಕಲಿಯುತ್ತಾರೆ ಎಂದು ಪ್ರಶ್ನಿಸಿದರು. ಶಾಲೆಯಲ್ಲಿ ಒಂದು ಪ್ರದರ್ಶನ ಬಳಿಕ ಯಕ್ಷಗಾನದ ಕುರಿತು ಮಕ್ಕಳಲ್ಲಿ ಆಸಕ್ತಿ ಬೆಳೆಯಿತು. ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾದರು. ಇದು ಕಲೆಯ ಗಟ್ಟಿತನಕ್ಕೆ ಸಾಕ್ಷಿ ಎಂದರು.
ಆಧುನಿಕತೆಯ ಅಬ್ಬರದ ನಡುವೆಯೂ ಭರತನಾಟ್ಯ, ಯಕ್ಷಗಾನ ಕಲಿಯಲು ಮಕ್ಕಳು ಉತ್ಸುಕರಾಗಿದ್ದಾರೆ. ಪಾಲಕರು ಸಹ ಉತ್ತೇಜನ ನೀಡುತ್ತಿದ್ದಾರೆ. ಇದು ಕಲೆ ಉಳಿವಿಗೆ ನೆರವಾಗಲಿದೆ. ಆಧುನಿಕತೆಯಲ್ಲೂ ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈವಿವಿ ನೃತ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಶೀಲಾ ಶ್ರೀಧರ್, ನೂಪುರ ಕಲಾವಿದರ ಟ್ರಸ್ಟ್‌ನ ಪ್ರೊ.ಕೆ.ರಾಮಮೂರ್ತಿರಾವ್, ಲಯಾಭಿನಯ ಸಂಸ್ಥೆಯ ಎಂ.ಡಿ.ಮಹಾಲಕ್ಷ್ಮೀ ಇನ್ನಿತರರಿದ್ದರು. ಬಳಿಕ ಅತಿಥಿ ಕಲಾವಿದರಿಂದ ನೃತ್ಯ ಪ್ರದರ್ಶನ, ಲಯಾಭಿನಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.