ಭರತನಾಟ್ಯ ಭಾರತೀಯ ಸಂಸ್ಕೃತಿ ಉಳಿಸುವ ಮಾಧ್ಯಮ

1 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸಂಸ್ಕೃತಿ ಬೆಳೆಸಲು ಭರತನಾಟ್ಯ ಬಹುಮುಖ್ಯವಾದ ಮಾಧ್ಯಮ ಮತ್ತು ಜನರಿಗೆ ನೇರವಾಗಿ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಮಾಧ್ಯಮವಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಕಲಾರ್ಪಣ ಟ್ರಸ್ಟ್​ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನೃತ್ಯ ಸಿಂಚನ-2025 ವಾರ್ಷಿಕ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಸಮಾಜದಲ್ಲಿ ಸಾಂಸ್ಕೃತಿಕವಾಗಿ, ಉತ್ತಮ ನಾಗರಿಕರಾಗಿ ಬೆಳೆಯಲು ಭರತನಾಟ್ಯ ಎಂಬ ಮಾಧ್ಯಮ ಪ್ರಮುಖ. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆ ಜತೆಗೆ ಉತ್ತಮ ವ್ಯಾಸಂಗ ಹಾಗೂ ಉತ್ತಮ ಆರೋಗ್ಯದ ಮನೋ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಮಕ್ಕಳಿಗೆ ಓದು ಬರಹದ ಜತೆಗೆ ನೃತ್ಯಾಭಿನಯಗಳ ಮೂಲಕ ಭಾರತೀಯ ಸಂಸ್ಕೃತಿ ದರ್ಶನ ಮಾಡಿಸುತ್ತಿರುವುದು ಅಭಿನಂದನಾರ್ಹ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಇದ್ದರು. ವಿದುಷಿ ಸೀಮಾ ಕುಲಕರ್ಣಿ, ವಿದುಷಿ ಪ್ರಮೋದಾ ಉಪಾಧ್ಯಾಯ, ಆತ್ಮಾನಂದ ಕಬ್ಬೂರ, ಸಂತೋಷ ಗಜಾನನ ಮಹಾಲೆ ಅವರಿಗೆ ಸನ್ಮಾನಿಸಲಾಯಿತು.

ನಂತರ ವಿದುಷಿ ಸವಿತಾ ಹೆಗಡೆ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಮೃದಂಗದಲ್ಲಿ ಗೋಪಿಕೃಷ್ಣ ಕೆ.ಜಿ, ಹಾಡುಗಾರಿಕೆ ವಿದುಷಿ ನವಮಿ ಮಹಾವೀರ, ವಾಯೋಲಿನ್​ ಪಂ. ಶಂಕರ ಕಬಾಡಿ ಸಾಥ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net