ಭರತನಾಟ್ಯ ಕಲಾವಿದೆ ಮಂಗಲದೀಪ್ತಿ ರಂಗಪ್ರವೇಶ

New BharataNatya
Published on

ಹುಬ್ಬಳ್ಳಿ : ಮಯೂರ ನೃತ್ಯ ಅಕಾಡೆಮಿಯ ಹೇಮಾ ವಾಘಮೋಡೆ ಅವರ ಬಳಿ ಭರತನಾಟ್ಯದ ತರಬೇತಿ ಪಡೆದ ಮಂಗಲದೀಪ್ತಿ ಮನಗೂಳಿ ಅವರ ರಂಗಪ್ರವೇಶ ಕಾರ್ಯಕ್ರಮ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಗುರುವಾರ ನೆರವೇರಿತು.

ವಿದುಷಿ ಹೇಮಾ ವಾಘಮೋಡೆ ಅವರು ತಮ್ಮ ಶಿಷ್ಯೆ ಮಂಗಲದೀಪ್ತಿ ಮನಗೂಳಿ ಅವರಿಗೆ ಗಜ್ಜೆ ತೊಡಿಸಿದರು. ನಂತರ ಮಂಗಲದೀಪ್ತಿ ಅವರು ಗುರು ಹಾಗೂ ಪಾಲಕರೊಂದಿಗೆ ನಟರಾಜ್ಯನ ಮೂರ್ತಿಗೆ ಪೂಜೆ ಸಲ್ಲಿಸಿದರು.

ಆದಿ ತಾಳದಲ್ಲಿ ಪುಷ್ಪಾಂಜಲಿ ಭರತನಾಟ್ಯ ಮಾಡುವ ಮೂಲಕ ಮಂಗಲದೀಪ್ತಿ ವೇದಿಕೆ ಪ್ರವೇಶಿಸಿದರು. ರಾಗಮಲ್ಹಾರದಲ್ಲಿ ನಟರಾಜಸ್ತೋತ್ರದ ಭರತನ್ಯಾಟ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಮಂಗಲದೀಪ್ತಿ, ರಾಗಮಾಲಿಕಾ ರಾಗದಲ್ಲಿ ನರಸಿಂಹಕೌತುವಂ ನೃತ್ಯದಲ್ಲಿ ಭಕ್ತಪ್ರಲ್ಹಾದ ಕಥೆಯ ಭರತನಾಟ್ಯ ಪ್ರದರ್ಶಿಸಿದರು. ನಂತರ ರಾಗಮಾಲಿಕ ರಾಗದಲ್ಲಿ ಶಬ್ಧಂ ನೃತ್ಯರೂಪಕದ ಮೂಲಕ ಪ್ರದರ್ಶಿಸಿದ ಭರತನಾಟ್ಯ ಪ್ರೇಕ್ಷಕರಿಂದ ಚೆಪ್ಪಾಳೆ ಗಿಟ್ಟಿಸಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಯಾಗಿದ್ದ ಪಂ. ಕೈವಲ್ಯಕುಮಾರ ಅವರು, ಭರತನಾಟ್ಯ ಭಾರತೀಯ ಸಂಸ್ಕೃತಿಯ ಪ್ರತೀಕ. ಇದು ಕೇವಲ ನೃತ್ಯ ಅಲ್ಲ. ಭರತನಾಟ್ಯದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.

ಭರತನಾಟ್ಯ ಭಾರತದಷ್ಟೇ ಅಲ್ಲ, ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಅನೇಕ ವಿದೇಶಿ ಕಾರ್ಯಕ್ರಗಳಲ್ಲಿ ಭರತನಾಟ್ಯ ಸೇರಿದಂತೆ ಭಾರತೀಯ ಸಂಸ್ಕೃತಿಯ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಜಿ.ಯು. ರಾಜು, ಸಿಪಿವಿ ಇಂಜಿನಿಯರಿಂಗ್ ಪ್ರೖೆ.ಲಿ.ನ ನಿರ್ದೇಶಕ ಡಿ. ಜೈಸಿಂಗ್ ಅತಿಥಿಗಳಾಗಿದ್ದರು.

ತಾಳದಲ್ಲಿ ಹೇಮಾ ವಾಘಮೋಡೆ, ಸಂಗೀತದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ವ, ಮೃದಂಗದಲ್ಲಿ ವಿದ್ವಾನ್ ಜಿ.ಎಸ್. ನಾಗರಾಜ, ಕೊಳಲುನಲ್ಲಿ ಎ.ಎನ್. ರಘುಸಿಂಹ, ರಿದಂನಲ್ಲಿ ವಿದ್ವಾನ್ ಡಿ. ಅರುಣಕುಮಾರ ಸಾಥ್ ನೀಡಿದರು. ದಿನೇಶ ವಾಘಮೋಡೆ, ನಾಗೇಂದ್ರ ಮನಗೂಳಿ,ಮಧು ಮನಗೂಳಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net