ನಾಯಕತ್ವ ಗುಣ ಬೆಳೆಸಲು ಭಾರತ ಸೇವಾದಳ ಸಹಕಾರಿ

SRT SEVADAL
Published on

ಶಿರಹಟ್ಟಿ: ಭಾರತ ಸೇವಾದಳವು ಶಿಸ್ತು, ಸೇವೆ, ತ್ಯಾಗ ಹಾಗೂ ರಾಷ್ಟ್ರೀಯತೆ ಪ್ರತಿಬಿಂಬಿಸುವ ಸಂಸ್ಥೆಯಾಗಿದ್ದು, ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಬಿಇಒ ಎನ್.ಎಚ್. ನಾಯಕ ಹೇಳಿದರು.

ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಸಹಯೋಗದಲ್ಲಿ ಪಟ್ಟಣದ ಮೇಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಭಾರತ ಸೇವಾದಳ ಮಕ್ಕಳ ನಾಯಕತ್ವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಸ್ವಾರ್ಥ ಸೇವಾ ಗುಣ ಬೆಳೆಸುವ ಭಾರತ ಸೇವಾದಳದಿಂದ ಮಕ್ಕಳಲ್ಲಿ ಶಿಸ್ತು, ತಾಳ್ಮೆ, ಧೈರ್ಯ ಹಾಗೂ ಸಹಕಾರದ ಗುಣಗಳು ವೃದ್ಧಿಯಾಗುತ್ತವೆ. ಅಲ್ಲದೆ, ಇಂತಹ ನಾಯಕತ್ವ ಶಿಬಿರಗಳ ಮೂಲಕ ಮಕ್ಕಳಲ್ಲಿ ಜ್ಞಾನಾಭಿರುಚಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಪತ್ರಕರ್ತ ಜಿ.ಬಿ. ಹೆಸರೂರು ಮಾತನಾಡಿ, ಭಾರತ ಸೇವಾದಳದ ಮೂಲಕ ಮಕ್ಕಳನ್ನು ದೇಶ ಸೇವೆಗೆ ಸಿದ್ಧಗೊಳಿಸುವ ಕಾರ್ಯ ಶಿಕ್ಷಕರಿಂದ ಆಗಬೇಕು ಎಂದರು.

ಭಾರತ ಸೇವಾದಳದ ಜಿಲ್ಲಾ ಸಂಘಟಕ ಕುಮಾರಸ್ವಾಮಿ ಬಳ್ಳಾರಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಚ್. ಭಜಂತ್ರಿ, ಸಂಪನ್ಮೂಲ ವ್ಯಕ್ತಿ ದೀಪಾಲಿ, ಎಸ್​ಡಿಎಂಸಿ ಅಧ್ಯಕ್ಷೆ ರೇಣುಕಾ ತುಳಿ, ಮುಖ್ಯೋಪಾಧ್ಯಾಯ ಎಚ್.ವೈ. ಹೊಸಮನಿ, ಶಿಕ್ಷಕಿ ಪಿ.ಬಿ. ಅಂಗಡಿ, ಭಾರತ ಸೇವಾದಳದ ತಾಲೂಕು ನಾಯಕಿ ಯಾಸ್ಮೀನ್ ಶಿರಹಟ್ಟಿ, ಹಾಗೂ ಶಾಲಾ ಶಿಕ್ಷಕರು ಇದ್ದರು, ಮೋಹನ ಮಾಂಡ್ರೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net