

ಬೆಂಗಳೂರು: ಸೇವಾ ಮನೋಭಾವವುಳ್ಳ ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಯುವಶಕ್ತಿಯನ್ನು ಮತ್ತಷ್ಟು ಸಬಲೀಕರಣಗೊಳಿಸುವ ನಿರ್ಣಯ ಮಾಡಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ, ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸಮಾನ ಸಂಘಟನೆಗಳ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯುವ ಜನರಲ್ಲಿ ದೇಶಾಭಿಮಾನ ಮೂಡಿಸುವ ಹಾಗೂ ಚಾರಿತ್ರ್ಯ ನಿರ್ಮಾಣ ಮಾಡುವ ಮೂಲಕ ಉತ್ತಮ ನಾಗರಿಕರನ್ನಾಗಿ ಸಜ್ಜುಗೊಳಿಸುವ ಕೆಲಸವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ. ನಮ್ಮಂತೆ ಹಲವು ಸಂಘಟನೆಗಳು ರಾಜ್ಯದಲ್ಲಿ ಕೆಲಸ ಮಾಡುತ್ತಿವೆ. ಯುವ ಸಬಲೀಕರಣ ನಮ್ಮೆಲ್ಲರ ಉದ್ದೇಶವಾಗಿದ್ದರೂ ಅವರನ್ನು ಸಜ್ಜುಗೊಳಿಸುವ ಮಾರ್ಗವಿಧಾನಗಳು ಬೇರೆ-ಬೇರೆಯಾಗಿವೆ. ಹೀಗಾಗಿ ಎಲ್ಲ ಸಂಘ ಸಂಸ್ಥೆಗಳ ಜತೆ ಒಟ್ಟಾಗಿ ಸೇರಿ ಕೆಲಸ ಮಾಡಲು ನಮ್ಮ ಸಂಸ್ಥೆ ಬಯಸಿದೆ. ಹೀಗಾಗಿ ಎನ್‌ಸಿಸಿ, ಎನ್‌ಎಸ್‌ಎಸ್, ಸೇವಾದಳ, ವೇಸ್ಟ್ ಮ್ಯಾನೇಜ್‌ಮೆಂಟ್, ಹೋಟೆಲ್ ಮಾಲೀಕರ ಸಂಘ, ಬಯೋಕಾನ್, ರೆಡ್‌ಕ್ರಾಸ್ , ಯುವ ಸಬಲೀಕರಣ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸೇರಿ ಇನ್ನಿತರ ಸಂಸ್ಥೆಗಳ ಪದಾಧಿಕಾರಿಗಳು ಅಥವಾ ಪ್ರತಿನಿಧಿಗಳೊಂದಿಗೆ ಇಂದು ಚರ್ಚಿಸಲಾಗಿದೆ. ಇದಕ್ಕೆ ಪ್ರತಿಯೊಬ್ಬರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಯುವಶಕ್ತಿಯನ್ನು ಮತ್ತಷ್ಟು ಸಬಲೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖವಾಗಿ ಯುವಜನತೆಯಲ್ಲಿ ರಸ್ತೆ ಸುರಕ್ಷತೆ, ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆ ಜಾಗೃತಿ, ಹೆಣ್ಣು ಭ್ರೂಣ ಹತ್ಯೆ ತಡೆಯುವುದ ಬಗ್ಗೆ, ಡ್ರಗ್ಸ್ ಬಗ್ಗೆ, ಪರಿಸರ ಸಂರಕ್ಷಣೆ, ಸ್ವಚ್ಛತಾ ಆಂದೋಲನ, ಗಿಡನೆಡುವ ಕಾರ್ಯಕ್ರಮವನ್ನು ನಾವೆಲ್ಲರೂ ಒಟ್ಟಿಗೆ ನಡೆಸಿದಲ್ಲಿ ಯುವಶಕ್ತಿಯನ್ನು ಮತ್ತಷ್ಟು ಸಬಲೀಕರಣ ಮಾಡಲು ಸಾಧ್ಯವಾಗಲಿದೆ. ಎಲ್ಲಾ ಸೇವಾ ಸಂಸ್ಥೆಗಳು ಒಟ್ಟಾಗಿ ಕೈ ಜೋಡಿಸಿದರೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ಸಂಘ ಸಂಸ್ಥೆಗಳ ನಡುವೆ ಪರಸ್ಪರ ವಿಶ್ವಾಸ ಅಗತ್ಯವಿದೆ. ಈ ಬಗ್ಗೆ ಸದ್ಯದಲ್ಲಿಯೇ ಶಿಕ್ಷಣ ಇಲಾಖೆಯ ಅಧಿಕಾರಿ ಶ್ರೀಕಾಂತ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ರೂಪು ರೇಷಗಳನ್ನು ಸಿದ್ದಪಡಿಸಲಾಗುವುದು ಎಂದು ವಿವರಿಸಿದರು.