

ವಿಜಯಪುರ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ಡಿ. 28 ರಂದು ‘ವಿಜಯಪುರ ಜಿಲ್ಲಾ ಬಂದ್’ಗೆ ಕರೆ ನೀಡಲಾಗಿದೆ.
ಅಂದು ಬೆಳಗ್ಗೆ 10 ರಂದು ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮೆರವಣಿಗೆ ಜಿಲ್ಲಾಡಳಿತ ಕಚೇರಿ ತಲುಪಲಿದೆ. ಅಂದಾಜು 10 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ದಲಿತ, ಅಹಿಂದ, ಪ್ರಗತಿಪರ, ಕಾರ್ಮಿಕ, ರೈತ ಸಂಘಟನೆಗಳು ಹಾಗೂ ಮಹಿಳಾ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಶಾಲೆ-ಕಾಲೇಜ್‌ಗಳು, ಮಾರುಕಟ್ಟೆ, ಆಟೋ ಚಾಲಕರು, ಅಂಗಡಿಗಳ ಮಾಲೀಕರು ಬಂದ್‌ಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡುತ್ತಿವೆ. ಜನರು ಸ್ವಯಂ ಪ್ರೇರಿತವಾಗಿ ಕೆಲಸ-ಕಾರ್ಯಗಳನ್ನು ಬಂದ್ ಮಾಡಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಡಾ.ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್, ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್‌ನ ಮನಃಸ್ಥಿತಿಯೇ ಸರಿಯಿಲ್ಲ. ಇವರ ಕಚೇರಿಗಳಲ್ಲಿ ಡಾ.ಅಂಬೇಡ್ಕರ್ ಫೋಟೊ ಸಹ ಅಳವಡಿಸಲ್ಲ. ಅಂಬೇಡ್ಕರ್ ರಚಿಸಿದ ಸಂವಿಧಾನದ ಬಗ್ಗೆಯೂ ಇವರಿಗೆ ಗೌರವ ಇಲ್ಲ. ಸಂವಿಧಾನ ಬದಲಿಸುವ ಇವರ ಹುನ್ನಾರ ನಿರಂತರವಾಗಿ ನಡೆದೇ ಇದೆ. ಇದೀಗ ಡಾ.ಅಂಬೇಡ್ಕರ್ ಅವರನ್ನು ಮೊದಲಿ ಟೀಕಿಸಿ ನೋಡಿದರಾಯಿತು ಆ ಮೇಲೆ ಪ್ರತಿಕ್ರಿಯೆ ಆಧರಿಸಿ ಸಂವಿಧಾನ ಬದಲಾವಣೆ ಮಾಡಿದರಾಯಿತೆಂಬ ಹುನ್ನಾರದ ಭಾಗವೇ ಅಮಿತ್ ಷಾ ಅವರಿಂದಾದ ಅಂಬೇಡ್ಕರ್ ಅವರ ಅವಹೇಳನ ಎಂದರು.
ಆದರೆ, ಅಂಬೇಡ್ಕರ್ ಅವರ ಕುರಿತ ಅವಹೇಳನಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು. ಸಂವಿಧಾನ ಪರವಾಗಿರುವ ಈ ದೇಶದ ಜನ ವ್ಯಾಪಕ ಹೋರಾಟ ಹಮ್ಮಿಕೊಂಡಿದ್ದು, ಈಗಾಗಲೇ ನಾಡಿನಾದ್ಯಂತ ಹೋರಾಟ ಚುರುಕುಗೊಂಡಿದೆ. ಇದೀಗ ವಿಜಯಪುರ ಜಿಲ್ಲಾ ಬಂದ್ ಕೂಡ ಯಶಸ್ವಿಯಾಗಲಿದೆ ಎಂದರು.
ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಸಂವಿಧಾನ ವಿರೋಧಿ ಮನಃಸ್ಥಿತಿಗಳಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದೊದಗಿದೆ. ಇದೀಗ ಎಲ್ಲ ಭಾರತೀಯರು ಒಗ್ಗಟ್ಟಾಗಿ ಸಂವಿಧಾನ ಪರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಪರ ನಿಲ್ಲಬೇಕು. ಆ ಮೂಲಕ ಭಾವೈಕ್ಯತೆಯ, ಸಮ-ಸಮಾಜ ನಿರ್ಮಾಣದ ಕನಸು ಕಂಡ ಡಾ.ಬಾಬಾಸಾಹೇಬರ ಆಶಯಕ್ಕೆ ಬಲ ತುಂಬಬೇಕೆಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಅಪರಾಧ ಹಿನ್ನೆಲೆಯಿಂದ ಬಂದ ಅಮಿತ್ ಷಾ ಅಂಥವರನ್ನು ಈ ದೇಶದ ಗೃಹ ಸಚಿವರನ್ನಾಗಿ ಮಾಡಿರುವುದೇ ದೊಡ್ಡ ದುರಂತ. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಈ ದೇಶದಲ್ಲಿರಲು ಅನರ್ಹರು ಎಂದರು.
ದಲಿತ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ರಮೇಶ ಆಸಂಗಿ, ನಾಗರಾಜ ಲಂಬು, ಸಂಜೀವ ಕಂಬಾಗಿ, ಶ್ರೀನಾಥ ಪೂಜಾರಿ ಮಾತನಾಡಿ, ಡಾ.ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ; ಅದೊಂದು ಶಕ್ತಿ. ಅಂಬೇಡ್ಕರ್ ಅವರು ದಲಿತರಿಗಾಗಿ ಮಾತ್ರವಲ್ಲ ಈ ದೇಶದ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದವರು. ಅಂಥ ಮಹಾನ್ ನಾಯಕನ ಬಗ್ಗೆ ಮಾತನಾಡಿರುವ ಅಮಿತ್ ಷಾ ಅಧಿಕಾರದಲ್ಲಿರಲು ಅರ್ಹರಲ್ಲ ಎಂದರು.
ಮುಖಂಡ ಎಂ.ಸಿ. ಮುಲ್ಲಾ, ಮಾತನಾಡಿ, ಡಿ. 28 ರಂದು ಅತ್ಯಂತ ಶಾಂತಿಯಿಂದ, ಸಂವಿಧಾನಬದ್ಧವಾಗಿ ಹೋರಾಟ ನಡೆಯಲಿದೆ. ಹಾಗೇನಾದರೂ ಅನಾಹುತವಾದರೆ ಅದಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರೇ ಕಾರಣ. ಹೀಗಾಗಿ ಪೊಲೀಸರು ಅವರ ಮೇಲೆ ನಿಗಾ ಇರಿಸಬೇಕೆಂದರು. ಮುಂದುವರಿದು, ಬಂದ್‌ಗೆ ಕರೆ ನೀಡುವವರು ಗಂಜಿ ಗಿರಾಕಿಗಳು ಎನ್ನುವ ಮೂಲಕ ಯತ್ನಾಳ ಅಂಬೇಡ್ಕರ್‌ವಾದಿಗಳನ್ನು ಗಂಜಿ ಗಿರಾಕಿಗಳು ಎಂದಿರುವುದು ಖಂಡನೀಯ ಎಂದರು.
ರೈತ ಸಂಘದ ಸಂಗಮೇಶ ಸಗರ, ಬೋವಿ ಸಮಾಜದ ಮುಖಂಡ ಮಾರುತಿ ಬಂಡಿ, ಲಿಂಗಾಯತ ನಾಯಕ ರವಿಕುಮಾರ ಬಿರಾದಾರ, ವಾಲ್ಮೀಕಿ ಸಮುದಾಯದ ಮುಖಂಡ ಮಲ್ಲಿಕಾರ್ಜುನ ಬಟಗಿ, ತಳವಾರ ಹಿತರಕ್ಷಣಾ ಸಮಿತಿಯ ಮುಖಂಡರಾದ ಆನಂದ ಗೊರಗುಂಡಗಿ, ಪರಶುರಾಮ ದಿಂಡವಾರ, ಪ್ರಕಾಶ ಗುಡಿಮನಿ, ಮಹಿಳಾ ಧುರೀಣೆ ಮಹಾದೇವಿ ಗೋಕಾಕ, ಮುಖಂಡ ಲಕ್ಷ್ಮಣ ಹಂದ್ರಾಳ, ಮಲ್ಲು ಕಂಬಾರ, ನಿರ್ಮಲಾ ಹೊಸಮನಿ, ಅನುಸೂಯಾ ಇಜೇರಿ, ಯಲ್ಲವ್ವ ಇಲಕಲ್ಲ, ಅಡಿವೆಪ್ಪ ಸಾಲಗಲ್ಲ, ವಿನಾಯಕ ಗುಣಸಾಗರ, ಶರಣು ಸಿಂಗೆ, ಪ್ರಕಾಶ ಗುಡಿಮನಿ, ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ, ಅಬ್ದುಲ್‌ರಜಾಕ್ ಹೊರ್ತಿ ಮತ್ತಿತರರಿದ್ದರು.