

ಮಂಡ್ಯ: ಜಾನ್ ಗುಟೆನ್‌ಬರ್ಗ್‌ನಿಂದ ಪರಿಚಯವಾದ ಮುದ್ರಣ ಕಲೆ ಇಂದು ವಿಸ್ತಾರವಾಗಿ ಬೆಳೆದಿದೆ. ಮುದ್ರಣ ಕ್ಷೇತ್ರದಲ್ಲಿ ಅಮೆರಿಕ, ಚೀನಾ ನಂತರ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಭಾರತ್ ಪ್ರಿಂಟ್ ಎಕ್ಸ್‌ಪೋ(ವಸ್ತುಪ್ರದರ್ಶನ)ದ ಸಹ ಅಧ್ಯಕ್ಷ ತುಷಾರ್ ವಿ.ದೋಟೆ ತಿಳಿಸಿದರು.
ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಭಾರತ್ ಪ್ರಿಂಟ್ ಎಕ್ಸೋ-2025 ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 1983ರಲ್ಲಿ ಚೀನಾ ಮೊದಲ ಬಾರಿಗೆ ಮುದ್ರಣ ಕ್ಷೇತ್ರದ ವ್ಯಾಪ್ತಿಯನ್ನು ಜಾಗತಿಕವಾಗಿ ಪರಿಚಯಿಸಿಕೊಟ್ಟಿತ್ತು. ನಂತರ ಬಾಂಬೆ, ಚೆನ್ನೈ, ಕೋಲ್ಕತಾ ನಂತರ 1999ರಲ್ಲಿ ಬೆಂಗಳೂರಿನಲ್ಲಿ ಮುದ್ರಣ ಕ್ಷೇತ್ರದ ವಿಶ್ವಮಟ್ಟದ ವಸ್ತು ಪ್ರದರ್ಶನ ನಡೆದಿತ್ತು. ಇಂತಹ ಬೃಹತ್ ಪ್ರದರ್ಶನ ಏ.24 ,25 ಮತ್ತು 26 ರಂದು ಮತ್ತೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಪ್ರದರ್ಶನದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಇಂದು ಎಲ್ಲ ಕ್ಷೇತ್ರದಂತೆ ಈ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಮುದ್ರಣಕಾರರು ತಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಸಮಯಪ್ರಜ್ಞೆಗೆ ಹೆಚ್ಚು ಒತ್ತು ನೀಡಬೇಕು. ಸಮಯಕ್ಕೆ ಸರಿಯಾಗಿ ಗ್ರಾಹಕರ ಅವಶ್ಯಕತೆ ಪೂರೈಸಬೇಕು. ಕಾರಣ ಗ್ರಾಹಕರ ಸಮಯಕ್ಕೂ ಮಾನ್ಯತೆ ಇರುತ್ತದೆ. ನಾವು ಮಾಡುವ ಕೆಲಸಗಳನ್ನು ಯೋಜನಾಬದ್ಧವಾಗಿ ಮಾಡಬೇಕು. ತಮ್ಮ ಕುಟುಂಬ 1932 ರಿಂದಲೂ ಮುದ್ರಣ ಕ್ಷೇತ್ರದಲ್ಲಿ ಮುಂದುವರೆದು, ಇಂದು ಮೂರನೇ ತಲೆಮಾರಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಅಕ್ಷರ ಜೋಡಣೆಯಿಂದ ಇಂದಿನ ಕಂಪ್ಯೂಟರ್‌ನ ಡಿಜಿಟಲ್ ಮಾಧ್ಯಮದವರೆಗೆ ಬೆಳೆದು ಬಂದ ಮುದ್ರಣದ ಹಾದಿಯನ್ನು ಶ್ಲಾಘಿಸಿದರು.
ರಾಜ್ಯ ಪ್ರಿಂಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿ, ಗ್ರಾಹಕರು ಮತ್ತು ನಮಗೂ ಅವಿನಾಭಾವ ಸಂಬಂಧವಿದೆ. ನಮ್ಮಲ್ಲಿರುವ ದಕ್ಷತೆ ಬೇರೆ ಯಾವುದೇ ವ್ಯಾಪಾರದಲ್ಲಿ ಇಲ್ಲ. ಗ್ರಾಹಕರ ಸಂತೋಷವೇ ನಮ್ಮ ಸಂತಸ. ನಾವು ಇನ್ನೂ ಉತ್ತಮವಾಗಿ ಬೆಳೆಯಲು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಹೆಲಿಕಾಪ್ಟರ್ ನಿರ್ಮಾಣ ತಂತ್ರಜ್ಞಾನದಲ್ಲಿ ಮೊದಲ ಸ್ಥಾನ ಪಡೆದರೆ, ನಂತರ ಮುದ್ರಣ ಮಾಧ್ಯಮದಲ್ಲಿ ಹೆಚ್ಚಿನ ತಾಂತ್ರಿಕತೆ ಬಳಕೆಯಾಗಿದೆ. ಮುದ್ರಣ ಕ್ಷೇತ್ರದ ಮೇಲೆ ಉಳಿದೆಲ್ಲ ಉದ್ಯಮಗಳು ಅವಲಂಬಿತವಾಗಿದೆ. ಕೆಲವರಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಅದರ ಬಗ್ಗೆ ಮಾಹಿತಿ ಇದ್ದರೆ ಒಳಿತು. ಮುದ್ರಣ ಮಾಧ್ಯಮ ಎಂದಿಗೂ ನಶಿಸಿ ಹೋಗುವುದಿಲ್ಲ. ಅದಕ್ಕೆ ಉಜ್ವಲ ಭವಿಷ್ಯವಿದೆ. ಆದರೆ, ಅದನ್ನು ಕಾಲಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯಲ್ಲಿ ಬಳಸಿ ಬೆಳೆಸಬೇಕು. ಅದರ ಮೂಲಕ ನಮ್ಮ ವ್ಯಾಪಾರ ವೃದ್ಧಿ ಮಾಡಿಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು.
ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮೀನಾರಾಯಣ ಮಾತನಾಡಿ, ವೃತ್ತಿ ಬಾಂಧವರು ತಾವು ಬೆಳೆಯಲು ಸಂಘಟನೆ ಮುಖ್ಯ. ತಾವು ಬೆಳೆಯುವುದರ ಜತೆಗೆ ಮುದ್ರಣ ಕ್ಷೇತ್ರದ ಸಾಧ್ಯತೆಗಳನ್ನು ತಿಳಿಯಬೇಕು. ಮುದ್ರಣ ತಂತ್ರಜ್ಞಾನದ ಬಗ್ಗೆ ಎಲ್ಲೆಲ್ಲೋ ನಡೆಯುತ್ತಿದ್ದ ವಸ್ತು ಪ್ರದರ್ಶನ ಇದೀಗ ಮನೆ ಬಾಗಿಲಿಗೆ ಬಂದಿದೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ತಂತ್ರಜ್ಞಾನದ ಆವಿಷ್ಕಾರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಘದ ರಾಜ್ಯ ಸಂಚಾಲಕ ಪ್ರವೀಣ್ ಕುಮಾರ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಆರ್.ರವೀಂದ್ರ, ಜಿಲ್ಲಾ ಸಂಯೋಜಕ ಎಂ.ಎಸ್.ಸತೀಶ್ ಇದ್ದರು.