ದೇಸೀಯ ಸಂಸ್ಕೃತಿ ಬಿಂಬಿಸಲು ಗೀತಾಮಂದಿರ ಮತ್ತೊಂದು ಹೆಜ್ಜೆ

Mela 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಮಾಹಿತಿ

ಭಾರತ ಮೇಳ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಲ್ಲ ಗ್ರಂಥಗಳಲ್ಲಿ ಮಹಾಭಾರತ ಸರ್ವಶ್ರೇಷ್ಠ ಗ್ರಂಥವಾಗಿದ್ದು, ಅದರಲ್ಲಿ ಭಗವದ್ಗೀತೆ ಶ್ರೇಷ್ಠವಾದುದೆಂದು ಅನೇಕ ಋಷಿ-ಮುನಿಗಳು ಉಲ್ಲೇಖಿಸಿದ್ದಾರೆ. ಗೀತಾಚಾರ್ಯನಾದ ಶ್ರೀಕೃಷ್ಣನಿಂದ ಬೋಧಿಸಲ್ಪಟ್ಟ ಗೀತೆಯ ಪ್ರಚಾರ, ಪ್ರಸಾರಕ್ಕಾಗಿ ವಿಶ್ವದ ಏಕೈಕ ಕೇಂದ್ರವಾದ ಗೀತಾ ಮಂದಿರವು 30 ವರ್ಷದಿಂದ ತೊಡಗಿಕೊಂಡಿದೆ. ಇದೀಗ ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ವೈಭವ ಹಾಗೂ ವೈಶಿಷ್ಟ್ಯಗಳನ್ನು ಜನಮಾನಸಕ್ಕೆ ತಲುಪಿಸಲು ಗೀತಾ ಮಂದಿರ ಇನ್ನೊಂದು ಹೆಜ್ಜೆ ಇಟ್ಟಿದೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

Mela 2
ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಜಿಪಂ, ತುಳು ಕೂಟ ಉಡುಪಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಗೀತಾ ಮಂದಿರದಲ್ಲಿ ಏ.12ರಂದು ಆಯೋಜಿಸಿದ್ದ 10 ದಿನಗಳ ಭಾರತ ಮೇಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

Mela 3
ಪುತ್ತಿಗೆ ಮಠದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು, ಬೆಂಗಳೂರಿನ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಎಸ್​.ಅಹಲ್ಯಾ, ತುಳು ಕೂಟದ ರತ್ನಾಕರ ಇಂದ್ರಾಳಿ, ಶಿವಕುಮಾರ ಅಂಬಲಪಾಡಿ, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ವಿದ್ವಾನ್​ ಬಿ.ಗೋಪಾಲ ಆಚಾರ್ಯ ಇತರರು ಉಪಸ್ಥಿತರಿದ್ದರು.

ಮೇಳದ ಸಂಚಾಲಕ ಕೆ.ವಿ. ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಹತ್ತಾರು ಬಗೆಯ ಮಳಿಗೆಗಳು

ಗೀತಾ ಮಂದಿರದಲ್ಲಿ ಸಂಪೂರ್ಣ ಭಗವದ್ಗೀತಾ ದರ್ಶನ, ಉದಯಾಸ್ತಮಾನ ಗೀತಾ ಪಾರಾಯಣ, ಪಾರಂಪರಿಕ ವಸ್ತು ಪ್ರದರ್ಶನ, ಧಾರ್ಮಿಕ, ಸಾಂಸ್ಕೃತಿಕ ಚಲನಚಿತ್ರ, ಕೃತಕ ಆಭರಣ, ಅನುಭವ ಮಂಟಪ, ಖಾದಿ ಭಂಡಾರ, ಕೈಮಗ್ಗದ ಸೀರೆ, ಕರಕುಶಲ ವಸ್ತುಗಳು, ಗವ್ಯ ಉತ್ಪನ್ನ, ಛಾಯಾಚಿತ್ರ-ಪುಸ್ತಕ ಪ್ರದರ್ಶನ, ಜ್ಯೋತಿಷ, ಖಗೋಳ, ಕೃಷಿ ಉತ್ಪನ್ನ, ಮಣ್ಣಿನ ಮಡಕೆ, ಆಕಾಶ ಕಾಯಗಳ ವೀಕ್ಷಣೆ, ಯಕ್ಷಗಾನ, ಜಾನಪದ, ಗಂಜೀಫಾ ಕಲೆಯ ವೈಭವ ಹೀಗೆ ಅನೇಕ ಬಗೆಯ ಮಳಿಗೆ ತೆರೆಯಲಾಗಿದೆ.

ಉಡುಪಿಗೆ ಶ್ರೀಕೃಷ್ಣನ ದರ್ಶನಕ್ಕೆ ಬಂದವರು ಗೀತಾಪಾನ ಮಾಡುವಂತಾಗಬೇಕು. ಗೀತಾ ಮಂದಿರಕ್ಕೆ ಬಂದು ಭಗವದ್ಗೀತೆಯ ಜ್ಞಾನ ಪಡೆಯುವಂತಾಗಬೇಕು. ಶ್ರೀಕೃಷ್ಣ ಬಾಲಲೀಲೆ ಹಾಗೂ ಮಧ್ವಾಚಾರ್ಯರ ತತ್ತ್ವಗಳ ತಿಳಿದುಕೊಳ್ಳಲು ಸಣ್ಣ ಸಿನಿಮಾ ತುಣುಕುಗಳನ್ನೂ ವೀಕ್ಷಿಸಬಹುದಾಗಿದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net