ಜೂ.28ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ: ಪ್ರಾಂತ ಕಾರ್ಯದರ್ಶಿ ಹಾಡ್ಯ ರಮೇಶರಾಜು ಮಾಹಿತಿ

1 (5)
Published on

ಮಂಡ್ಯ: ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸದೆ ಇನ್ನಷ್ಟು ಬಲಪಡಿಸಿ ಕಠಿಣ ಕ್ರಮ ಕೈಗೊಂಡು ವ್ಯವಸಾಯವನ್ನೇ ನಂಬಿಕೊಂಡಿರುವ ರೈತರನ್ನು ಉಳಿಸಬೇಕು ಎಂದು ಒತ್ತಾಯಿಸಿ ಜೂ.28ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ ಕಾರ್ಯದರ್ಶಿ ಹಾಡ್ಯ ರಮೇಶರಾಜು ತಿಳಿಸಿದರು.

ರಾಜ್ಯದ ಮುಖ್ಯ ಕಸುಬು ಹೈನುಗಾರಿಕೆ ಮತ್ತು ವ್ಯವಸಾಯ. ಶೇ.70ರಷ್ಟು ಜನರು ಇದನ್ನೇ ಆಶ್ರಯಿಸಿದ್ದಾರೆ. ಹೈನುಗಾರಿಕೆ ಇಲ್ಲದೆ ವ್ಯವಸಾಯವಿಲ್ಲ, ಇದಕ್ಕೆ ಮುಖ್ಯವಾದ ಆಧಾರ ಗೋವು. ಆದ್ದರಿಂದ ಹೈನುಗಾರಿಕೆ ವ್ಯವಸಾಯ ಒಂದಕ್ಕೊಂದು ಪೂರಕ. ದೇಸಿ ತಳಿ ಹಸು ಮತ್ತು ಎತ್ತುಗಳು ಇಂದು ಅಳಿವಿನ ಅಂಚಿನಲ್ಲಿವೆ. ಗೋವು ದೇಶದ ಪ್ರಾಣ ಎಂದುಕೊಂಡು ಕಳೆದ 75 ವರ್ಷಗಳಿಂದ ಸರ್ಕಾರಗಳು ಗೋವು ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೃಷಿ ಕ್ಷೇತ್ರ ಸೊರಗಿ ಹೋಗಿದೆ. ನಷ್ಟದ ಹಾದಿಯಲ್ಲಿರುವ ವ್ಯವಸಾಯ ಬದುಕಿನಿಂದ ಇಂದಿನ ಯುವಜನತೆ ದಿಕ್ಕು ತೋಚದೆ ಉದ್ಯೋಗ ಅರಸುತ್ತಾ ನಗರಗಳತ್ತ ವಲಸೆ ಹೋಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸದೇ ಕಾಯ್ದೆಯನ್ನು ಬಲಪಡಿಸಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರ 6 ಸಾವಿರ ರೂ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂಗಳನ್ನು ರೈತರ ವ್ಯವಸಾಯದ ಖರ್ಚಿಗೆ ಧನ ಸಹಾಯ ಮಾಡುತ್ತಿರುವುದರಿಂದ ರೈತರ ಆತ್ಮಹತ್ಯೆಗಳು ಕೊಂಚ ತಗ್ಗಿದೆ. ಒಳಸುರಿಗಳಿಂದ ವ್ಯವಸಾಯದ ಖರ್ಚು ಇಂದಿನ ದಿನಗಳಲ್ಲಿ ತುಂಬಾ ಹೆಚ್ಚಾಗಿದೆ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಜೆ.ಕೆ. ಬಸವರಾಜು, ಶಿವಣ್ಣ, ಪುಟ್ಟಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net