ಕಾಂಗ್ರೆಸ್ಸಿಗರಿಗೆ ಆತ್ಮನಿರ್ಭರದ ಸತ್ಯದರ್ಶನ: ಬಹಿರಂಗ ಪತ್ರ ಬರೆದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್

CTM
Published on

ಮಂಡ್ಯ: ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ಅವರ ಭಾರತ್ ಜೂಡೋ ಯಾತ್ರೆಯಿಂದ ಆತ್ಮನಿರ್ಭರ ಭಾರತದ ಸತ್ಯದರ್ಶನವಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಬಹಿರಂಗ ಪತ್ರ ಬರೆದಿರುವ ಅವರು, ಹಿಂದೆಲ್ಲ ರಾಜ ಮಹಾರಾಜರು ತಮ್ಮ ದೇಶ ಪರ್ಯಟನೆಗೆ ಮಾರುವೇಷದಲ್ಲಿ ತೆರಳಿ ಜನರ ಸಂಕಷ್ಟ ಮತ್ತು ಸುಭಿಕ್ಷೆಯ ಕುರಿತು ಪರಿಚಯ ಮಾಡಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಈ ಯಾತ್ರೆಯ ಮೂಲಕ ಪ್ರಸಕ್ತ ಭಾರತದ ಸ್ಥಿತಿಗತಿಯ ಪರಿಚಯ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಷ್ಟೆಲ್ಲ ಅಭಿವೃದ್ಧಿ ಹೊಂದಿದೆ ಎಂಬುದರ ಅರಿವು ಅವರಿಗೆ ಯಾತ್ರೆಯ ಮಧ್ಯದಲ್ಲೇ ಆಗಬಹುದು ಎಂದಿದ್ದಾರೆ.

ಕಾಂಗ್ರೆಸ್ಸಿಗರಿಗೆ ಭಾರತ ಪಾದಯಾತ್ರೆ ಅತ್ಯಂತ ಅವಶ್ಯವಾಗಿತ್ತು. ಬದಲಾದ ಭಾರತವನ್ನು ಕಣ್ಣಾರೆ ಕಾಣುವ ಅವಕಾಶ ಇದರಿಂದ ಅವರಿಗೆ ಸಿಗಲಿದೆ. ದೇಶ ಹೇಗೆಲ್ಲಾ ಬದಲಾಗಿದೆ, ಪರಿವರ್ತನೆಗಳು ನಡೆದಿವೆ, ಭ್ರಷ್ಟಾಚಾರ ಮುಕ್ತವಾಗಿದೆ, ಡಿಜಿಟಲ್ ಕ್ರಾಂತಿ ಆಗಿದೆ. ಸಾಮಾನ್ಯ ವ್ಯಕ್ತಿಗಳು ಸ್ವಾವಲಂಭಿಯಾಗಿ ಆತ್ಮನಿರ್ಭರತೆಯಿಂದ ಬದುಕುತ್ತಿದ್ದಾನೆ ಎನ್ನುವ ಪ್ರತ್ಯಕ್ಷ ಅನುಭವ ಮತ್ತು ಅನಾವರಣ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net