

ಕೆ.ಆರ್.ಪೇಟೆ: ಭಾರತ್ ಜೋಡೋ ಯಾತ್ರಗೆ ಜನರನ್ನು ಸಂಘಟಿಸಿ ಕರೆತರುವ ಸಂಬಂಧ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಮಾತನಾಡಿ, ತಾಲೂಕು ಘಟಕಗಳ ಅಧ್ಯಕ್ಷರ ಗಮನಕ್ಕೆ ಬಾರದಂತೆ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಕಡೆಗಣಿಸಲಾಗಿದೆ. ಹಣವುಳ್ಳವರಿಗೆ ಮಣೆ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಭೆಯಲ್ಲಿ ಗದ್ದಲ, ಕೂಗಾಟ ಆರಂಭವಾಯಿತು. ಮಧ್ಯಪ್ರವೇಶಿಸಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸುರೇಶ್ ಅವರಿಂದ ಮೈಕ್ ಪಡೆಯಲು ಮುಂದಾದರು. ಮೈಕ್ ನೀಡಲು ನಿರಾಕರಿಸಿದ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಹೋರಟವೇ ಸತ್ತು ಹೋಗಿದೆ. ಸಚಿವ ಕೆ.ಸಿ.ನಾರಾಯಣಗೌಡ ಆಡಳಿತದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಚಿವರ ಆಡಳಿತ ವೈಫಲ್ಯದ ಬಗ್ಗೆ ಕಾಂಗ್ರೆಸ್ ಹೋರಾಟ ನಡೆಸುತ್ತಿಲ್ಲ. ಪಟ್ಟಣದ ಸರ್ವೆ ನಂ 287ರ ಗೋಮಾಳದ ಜಮೀನನ್ನು ರೈತರಿಂದ ಕಸಿಯಲಾಗುತ್ತಿದೆ. ಪಟ್ಟಣದ ಟಿ.ಬಿ. ಬಡಾವಣೆಯ ನಿವೇಶನಗಳು ನ್ಯಾಯಾಲಯದಲ್ಲಿದ್ದರೂ ಸಚಿವ ಕೆ.ಸಿ.ನಾರಾಯಣಗೌಡ ಜಾತಿ ಸಂಘಟನೆಗಳ ಭವನಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದು ಪಟ್ಟು ಹಿಡಿದ ಕೆಲವು ಮುಖಂಡರ ನಡೆಯಿಂದ ಬೇಸರಗೊಂಡ ಎನ್.ಚಲುವರಾಯಸ್ವಾಮಿ, ನಾವಿಲ್ಲಿ ಸೇರಿರುವುದು ರಾಹುಲ್ ಗಾಂಧಿ ಅವರ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಯಶಸ್ಸಿನ ಬಗ್ಗೆ ಚರ್ಚಿಸಲು. ನಿಮ್ಮ ಸಮಸ್ಯೆಗಳನ್ನು ಕೇಳಲು ಪ್ರತ್ಯೇಕ ಸಭೆ ಕರೆಯುತ್ತೇವೆ. ನನ್ನ ಮಾತು ಕೇಳುವುದಿಲ್ಲ ಎನ್ನುವುದಾದರೆ ಹೋಗುತ್ತೇನೆಂದು ಮೈಕ್ ಎಸೆದು ಹೊರಡಲು ಅನುವಾದರು.
ಗದ್ದಲ ತಹಬದಿಗೆ ಬಂದ ನಂತರ ಮಾತನಾಡಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ರಾಜಕೀಯ ಪಕ್ಷಗಳಲ್ಲಿ ಗೊಂದಲ ಸಹಜ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಬೇಕೆಂದು ಒಮ್ಮತದ ತೀರ್ಮಾನಕ್ಕೆ ಬರಬೇಕು. ಕಾರ್ಯಕರ್ತರ ನಡುವೆ ಮುಖಂಡರು ಭಿನ್ನಮತ ಸೃಷ್ಟಿಸಬಾರದು. ಅ. 3ರಿಂದ 6ರ ವರೆಗೆ ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಲಿರುವ ರಾಹುಲ್ ಗಾಂಧಿ ಪಾದಯಾತ್ರೆಗೆ ತಾಲೂಕಿನಿಂದ ಕನಿಷ್ಠ 5 ಸಾವಿರ ಜನ ಭಾಗವಹಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಭಾರತ್ ಜೋಡೋ ಯಾತ್ರೆ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ವಿಜಯ ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಜಿ.ಪಂ ಮಾಜಿ ಸದಸ್ಯರಾದ ಕೆ.ಎಲ್.ದೇವರಾಜು, ಕೊಡಗಹಳ್ಳಿ ಮಂಜೇಗೌಡ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಅಗಸರಹಳ್ಳಿ ಗೋವಿಂದರಾಜು, ಮನ್‌ಮುಲ್ ನಿರ್ದೇಶಕ ಡಾಲು ರವಿ, ಪುರಸಭಾ ಸದಸ್ಯರಾದ ಡಿ.ಪ್ರೇಂಕುಮಾರ್, ಕೆ.ಆರ್.ರವೀಂದ್ರಬಾಬು, ರಾಜಯ್ಯ, ಬಸ್ತಿರಂಗಪ್ಪ ಇತರರು ಇದ್ದರು.