ಭಾರತ್ ಜೋಡೋ ಪಾದಯಾತ್ರೆ; ಒಂದನೇ ವರ್ಷದ ಸಂಭ್ರಮಾಚರಣೆ

8sgr3
ಸಾಗರದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪ ಮಾತನಾಡಿದರು. ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಸುರೇಶಬಾಬು, ಚೇತನರಾಜ್ ಕಣ್ಣೂರು ಇತರರಿದ್ದರು.
Published on

ಸಾಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಇತಿಹಾಸ ಪುಟದಲ್ಲಿ ದಾಖಲಾಗಿದೆ. ರಾಜ್ಯದಲ್ಲಿ 500 ಕಿಮೀಗೂ ಹೆಚ್ಚು ದೂರ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ನಾನು ಕೂಡ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ಬ್ಲಾಕ್ ಕಾಂಗ್ರೆಸ್‌ನಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಾರತ್ ಜೋಡೋ ಪಾದಯಾತ್ರೆಯ ವರ್ಷಾಚರಣೆ ಅಂಗವಾಗಿ ನಗರದ ಹೋಟೆಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಾಗಿದ ಎಲ್ಲ ಕಡೆ ಕಾಂಗ್ರೆಸ್ ಅದ್ವಿತೀಯ ಗೆಲುವು ಸಾಧಿಸಿದ್ದರೆ, ಮೋದಿ ಯಾತ್ರೆ ಮಾಡಿದ ಸ್ಥಳಗಳಲ್ಲಿ ಬಿಜೆಪಿ ಸೋತಿದೆ ಎಂದು ಟೀಕಿಸಿದರು.
ದೇಶದಲ್ಲಿ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸಿಕೊಂಡು ಹೋಗುವ ಸಂದೇಶವನ್ನು ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿ ನೀಡಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ ನೀಡುವ ಮೂಲಕ ಅಧಿಕಾರ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ ಐದು ಗ್ಯಾರಂಟಿ ಪೈಕಿ ನಾಲ್ಕು ಈಡೇರಿಸಿದ್ದು ನುಡಿದಂತೆ ನಡೆದ ಸರ್ಕಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದ ಅಭ್ಯುದಯಕ್ಕಾಗಿ ಎಲ್ಲರೂ ತೊಡಗಿಕೊಳ್ಳೋಣ ಎಂದು ಸಲಹೆ ನೀಡಿದರು.’
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ದೇಶದ ಜನರನ್ನು ಮಾನಸಿಕವಾಗಿ ಒಗ್ಗೂಡಿಸಿದ ಹೆಗ್ಗಳಿಕೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಸಲ್ಲುತ್ತದೆ. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಮೌಲ್ಯಕ್ಕೆ ಜನ ಒಗ್ಗೂಡುವಲ್ಲಿ ರಾಹುಲ್ ಗಾಂಧಿ ಪ್ರಯತ್ನ ಶ್ಲಾಘನೀಯವಾದದ್ದು. ಪಾದಯಾತ್ರೆ ಮುಗಿದು ಒಂದು ವರ್ಷವಾಗಿದ್ದು ದೇಶಾದ್ಯಂತ ಪಾದಯಾತ್ರೆ ಮೂಲಕ ಸಂಭ್ರಮಾಚರಣೆ ಕಾಂಗ್ರೆಸ್ ನಡೆಸುತ್ತಿದೆ. ಪಾದಯಾತ್ರೆಯ ಮಹತ್ವವನ್ನು ಮತ್ತೊಮ್ಮೆ ಮನನ ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಪ್ರಮುಖರಾದ ಐ.ಎನ್.ಸುರೇಶಬಾಬು, ಚೇತನರಾಜ್ ಕಣ್ಣೂರು, ಮಹಾಬಲ ಕೌತಿ, ತಾರಾಮೂರ್ತಿ, ಮಧುಮಾಲತಿ, ಸುಮಂಗಲಾ ರಾಮಕೃಷ್ಣ, ಎನ್.ಲಲಿತಮ್ಮ, ಪರಿಮಳಾ, ಪಾರ್ವತಿ ಬೇಸೂರು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅಶೋಕ ಬೇಳೂರು ಇತರರಿದ್ದರು.

ಐತಿಹಾಸಿಕ ಮೈಲಿಗಲ್ಲು
ಕಾಂಗ್ರೆಸ್ ಸೈದ್ಧಾಂತಿಕ ತಳಹದಿಯ ಮೇಲೆ ನಿಂತಿದೆ. ಜಾತಿ ಆಧಾರದ ಮೇಲೆ ನಮ್ಮ ಪಕ್ಷ ಎಂದಿಗೂ ತೊಡಗಿಕೊಳ್ಳುವುದಿಲ್ಲ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು. ನೀತಿ ಆಧಾರದ ಮೇಲೆ ಪಕ್ಷವನ್ನು ಸಂಘಟಿಸಿ ಸಮ ಸಮಾಜದ ಹಿನ್ನೆಲೆಯಲ್ಲಿ ಮುನ್ನಡೆಸಲಾಗುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ದೇಶದಲ್ಲಿಯೇ ಸಂಚಲನ ಮೂಡಿಸಿ ರಾಜ್ಯದಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ಪಕ್ಷ ಸಂಘಟನಾತ್ಮಕವಾಗಿ ತೊಡಗಿಕೊಂಡು ಮುನ್ನಡೆಯಲು ಈ ಯಾತ್ರೆ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net