

ಹುಬ್ಬಳ್ಳಿ : ಬೆಲೆ ಏರಿಕೆ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ‘ಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆ’ಗೆ ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು.
ಇಲ್ಲಿನ ಮೂರುಸಾವಿರ ಮಠದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಧಾನ್ಯ ದಾಸ್ತಾನು ಹೊತ್ತ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.
ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸದಾ ರೈತರ ಮತ್ತು ಕಡು ಬಡವರ ಹಿತ ಕಾಯಲು ಬದ್ಧವಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಬೆಲೆ ಏರಿಕೆ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಇದೇ ಪ್ರಥಮ ಬಾರಿಗೆ ಇಂತಹ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದರು.
ಈಗಾಗಲೇ ದೆಹಲಿ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಭಾರತ್ ಬ್ರ್ಯಾಂಡ್ ಅಡಿ ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಂಡಿದ್ದು, ಈಗ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ವಾಹನಗಳಲ್ಲಿ ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಿಜೆಪಿಯ ಪ್ರಭು ನವಲಗುಂದಮಠ ಹಾಗೂ ಇತರರು ಹಾಜರಿದ್ದರು.
ಯಾವುದಕ್ಕೆ ಎಷ್ಟು ಬೆಲೆ? : ಪ್ರತಿ ಕೆಜಿಗೆ ಭಾರತ್ ಅಕ್ಕಿ 34 ರೂ., ಭಾರತ್ ಗೋಧಿ ಹಿಟ್ಟು 30 ರೂ., ಭಾರತ್ ಕಡಲೆ ಬೇಳೆ 70 ರೂ. ಮತ್ತು ಭಾರತ್ ಹೆಸರು ಬೇಳೆಯನ್ನು 107 ರೂ. ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಮೊಬೈಲ್ ವಾಹನಗಳ ಮೂಲಕ ನೇರವಾಗಿ ವಿತರಿಸಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.