ರಸ್ತೆ ರಾಜ ಬಿರುದಿಗೆ ಧಕ್ಕೆ ತರುವುದಿಲ್ಲ

BRM CC ROAD 01 (2)
Published on

ಭರಮಸಾಗರ: ಕ್ಷೇತ್ರದ ಜನ ನನ್ನ ಕೆಲಸ ಮೆಚ್ಚಿ ರಸ್ತೆ ರಾಜ ಬಿರುದು ಕೊಟ್ಟಿದ್ದು, ಜನರ ನಂಬಿಕೆಗೆ ಧಕ್ಕೆ ಬರದಂತೆ ಇನ್ನೂ ನಾಲ್ಕು ತಿಂಗಳಲ್ಲಿ ಈ ಭಾಗದ ಎಲ್ಲ ರಸ್ತೆಗಳೂ ಅಭಿವೃದ್ಧಿಯಾಗಲಿವೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೋಬಳಿಯ ಇಸಾಮುದ್ರ ಹೊಸಟ್ಟಿ ಗ್ರಾಮದಲ್ಲಿ ಭಾನುವಾರ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 18 ತಿಂಗಳಲ್ಲಿ ಕ್ಷೇತ್ರಕ್ಕೆ 1300 ಕೋಟಿ ರೂ. ಅನುದಾನ ತರಲಾಗಿದೆ. ಜತೆಗೆ ಶಾಲಾ ಕಟ್ಟಡ, ದೇವಸ್ಥಾನಗಳಿಗೂ ಆದ್ಯತೆ ನೀಡಿ ಅನುದಾನ ನೀಡಲಾಗುತ್ತಿದೆ ಎಂದರು.

ಈಗಾಗಲೇ ಅಡವಿಗೊಲ್ಲರಹಟ್ಟಿಗೆ ಹೋಗುವ ರಸ್ತೆಗೆ 2 ಕೋಟಿ, ನಲ್ಲಿಕಟ್ಟೆಯಿಂದ ಭರಮಸಾಗರದ ವರೆಗೆ 3 ಕೋಟಿ ರೂ., ಇಸಾಮುದ್ರ ಗೊಲ್ಲರಹಟ್ಟಿಯಿಂದ ಭರಮಸಾಗರದ ವರೆಗೆ 1.75 ಲಕ್ಷ, ನಲ್ಲಿಕಟ್ಟೆಯಿಂದ ಹುಲ್ಲೆಹಾಳು ವರೆಗೂ 75 ಲಕ್ಷ, ಕಾಲ್ಗೆರೆಯಿಂದ ಕರಿಯಮ್ಮನಹಳ್ಳಿಗೆ 60 ಲಕ್ಷ, ಹಿರೆಕಬ್ಬಿಗೆರೆಯಿಂದ ಚಿಕ್ಕಬೆನ್ನೂರು ವರೆಗೆ 1.50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಮನವಿ ಸಲ್ಲಿಕೆ: ಹೊಸಟ್ಟಿಯಲ್ಲಿ ವಸತಿ ರಹಿತರಿಗೆ ಮನೆ ನೀಡಬೇಕು, ಗಂಗಾಕಲ್ಯಾಣ ಯೋಜನೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಬೇಕು, ಗ್ರಾಮದಲ್ಲಿ ಸೇವಾಲಾಲ್ ದೇವಸ್ಥಾನ ನಿರ್ಮಿಸಲು ಅನುದಾನ ನೀಡಬೇಕೆಂದು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯರಾದ ಎನ್.ಕಲ್ಲೇಶ್, ಶೇಖರಪ್ಪ, ನಾಗೇಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಸಾಮಿಲ್ ಶಿವಣ್ಣ, ಗೀತಾಬಾಯಿ ಪಾಪನಾಯ್ಕ, ರಾಯಕ್ಕ, ಕಮಲಾನಾಯ್ಕ, ತಾಂಡಾಅಭಿವೃದ್ಧಿ ನಿಗಮದ ನಿರ್ದೇಶಕ ಗಿರೀಶ್, ಯಮ್ಮನಘಟ್ಟ ಶಿವಕುಮಾರ್, ತಿಪ್ಪೇಸ್ವಾಮಿ, ಸಿದ್ದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net