ನೀರಾವರಿ ಯೋಜನೆ ಪರಿಶೀಲನೆ

BRM J2 JACKWELL SWAMIJI
Published on

ಭರಮಸಾಗರ: ನೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಭರಮಸಾಗರ ಕೆರೆ ತುಂಬಲು ಕೇವಲ 23 ದಿನ ಸಾಕು ಎಂದು ಸಿರಿಗೆರೆಯ ತರಳಬಾಳು ಬಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕೆರೆ ನೀರು ಹರಿಸುವ ಯೋಜನೆಯ ನೀಲಿನಕ್ಷೆ ಪ್ರಕಾರ ಗುರುತಿಸಲಾದ ಗ್ರಾಮದ ದೊಡ್ಡಕೆರೆ ಏರಿ ಮೂಲೆಯಲ್ಲಿ ಶುಕ್ರವಾರ ಸಂಜೆ ಪರಿಶೀಲಿಸಿದ ಬಳಿಕ ಮಾತನಾಡಿದರು.

ಆಗಸ್ಟ್‌ನಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕ ರೀತಿ ಬರುವ ಆ.15ಕ್ಕೆ ಭರಮಸಾಗರ ಕೆರೆಗೆ ನೀರು ಬರುವ ನಿರೀಕ್ಷೆ ಇದೆ. ಇದು ಬರದ ನಾಡಿಗೆ ಸೌಭಾಗ್ಯದ ದಿನ ಆಗಲಿದೆ.

ಭರಮಸಾಗರದಿಂದ ಇನ್ನುಳಿದ ಕೆರೆಗಳಿಗೆ ನೀರು ಹರಿದು ಮುಂದಿನ ಪೀಳಿಗೆಗೆ ಬರಗಾಲವೇ ತಿಳಿಯದಂತಹ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ದೊಡ್ಡಕೆರೆ ಜಾಕ್‌ವೆಲ್ ಸ್ಥಳದ ನಕ್ಷೆಯನ್ನು ನೀರಾವರಿ ನಿಗಮದ ಅಧಿಕಾರಿಗಳು ಸ್ವಾಮೀಜಿ ಅವರಿಗೆ ಅವರಿಗೆ ವಿವರಿಸಿದರು. ಗ್ರಾಮದ ಮುಖಂಡರು, ಏತ ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತರು, ಕೆರೆ ನೀರು ಹಿಡುವಳಿದಾರರು ಇದ್ದರು.

ಹಸಲಬಾಳು ಮಲ್ಲಶೆಟ್ಟಿ ಹಳ್ಳಿ ಕೆರೆ ಜಾಕ್ವೆಲ್ ಪರಿಶೀಲನೆ: ಮಲ್ಲಶೆಟ್ಟಿಹಳ್ಳಿ ಕೆರೆ, ಹರಿಹರದ ಹಲಸಬಾಳು ಬಳಿ ಜಾಕ್‌ವೆಲ್, ಜಗಳೂರು ಕೆರೆಗೆ ನೀರು ಹರಿಸುವ ಜಾಕ್‌ವೆಲ್‌ನ್ನು ಶ್ರೀಗಳು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾವಿರ ಎಕರೆ ವಿಸ್ತೀರ್ಣದ ತುಪ್ಪದಹಳ್ಳಿ ಕೆರೆಗೆ ನೀರು ಹರಿದರೆ ಆ ಭಾಗದಲ್ಲಿ ಜೀವಕಳೆ ಬರಲಿದೆ ಜನರಿಗೆ ನೆಮ್ಮದಿ ಸಿಗಲಿದೆ ಎಂದರು.

ಮಲ್ಲಶೆಟ್ಟಿಹಳ್ಳಿಯಲ್ಲಿ ಒಂದು ಎಕರೆ ಜಾಗದಲ್ಲಿ ಗೋಕಟ್ಟೆ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡುವಂತೆ ಸ್ಥಳಿಯರು ಮನವಿ ಮಾಡಿದರು.ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ನೀರಾವರಿ ನಿಗಮದ ನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ಮಲ್ಲಶೆಟ್ಟಿಹಳ್ಳಿಯ ಕೆರೆ, ಜಾಕ್‌ವೆಲ್ ಕೆಲಸಕ್ಕೆ 5 ಕೋಟಿ ರೂ. ನೀಡಲಾಗುವುದು. ಇದರಲ್ಲಿ ಗೋಕಟ್ಟೆಗೂ ಹಣ ಕೊಡುವುದಾಗಿ ತಿಳಿಸಿದರು.

ಒಳ್ಳೇ ಕೆಲಸಕ್ಕೆ ಅಡ್ಡಿಪಡಿಸಬೇಡಿ: ನೀರು ತುಂಬಿಸುವ ಯೋಜನೆ ಎಲ್ಲರ ಒಳಿತಿಗಾಗಿ ಕೈಗೊಂಡಿರುವ ಕೆಲಸ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು. ನ್ಯಾಯಾಲಯಕ್ಕೆ ಹೋಗದೆ ಏನೇ ಸಮಸ್ಯೆ ಇದ್ದರೂ ಪರಸ್ಪರ ಸಮಾಲೋಚಿಸಿ ಸ್ಥಳದಲ್ಲೇ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗ್ರಾಮಸ್ಥರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net