

ಭರಮಸಾಗರ: ಇಲ್ಲಿನ ದೊಡ್ಡಕೆರೆಗೆ ನೀರು ಬರಲು ಅವರವರ ಅಧಿಕಾರವಧಿಯಲ್ಲಿ ಸಹಕರಿಸಿದ ನಾಲ್ವರು ರಾಜಕೀಯ ದಿಗ್ಗಜರಿಂದ ಕೆರೆಯನ್ನು ಉದ್ಘಾಟಿಸುವ ಅಭಿಲಾಷೆ ಇದೆ ಎಂದು ತರಳಬಾಳು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಗೆ ಗುರುವಾರ ಸಂಜೆ ಭೇಟಿ ನೀಡಿ ಕೋಡಿ ಬಿದ್ದ ಕ್ಷಣವನ್ನು ವೀಕ್ಷಿಸಿದ ಬಳಿಕ ಗ್ರಾಮದಲ್ಲಿ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕೆರೆ ಉದ್ಘಾಟನೆ ಮಾಡಿಸಲಾಗುವುದು ಎಂದರು.
ಏತನೀರಾವರಿ ಯೋಜನೆಗಳು ಯಶಸ್ವಿಯಾಗುವುದು ಕಷ್ಟ ಎನ್ನುವ ಕಾಲವೊಂದಿತ್ತು. ಆದರೆ, ಅದನ್ನೆಲ್ಲ ಮೀರಿ ಭರಮಸಾಗರ ಏತನೀರಾವರಿ ಸಫಲಗೊಂಡಿದೆ. ಇದು ವಿಶ್ವಮಟ್ಟದ ಮಾದರಿ ಯೋಜನೆ ಎಂದು ಸಂತಸ ವ್ಯಕ್ತಪಡಿಸಿದರು.
ಕೆರೆ ಕೋಡಿ ಬಿದ್ದರೂ ನಿರಂತರನೀರು ಹರಿಸಬೇಕು. ಅದು ತುಪ್ಪದ ಹಳ್ಳಿ ಕೆರೆಗೆ ಹೋಗಿ ಅಲ್ಲಿಂದ ಹರಪನಹಳ್ಳಿ, ಕೂಡ್ಲಿಗಿ ಭಾಗದ ಕೆರೆ ಸೇರಲಿದೆ ಎಂದು ಹೇಳಿದರು. ನೀರಾವರಿ ನಿಗಮ ಇಂಜಿನಿಯರ್ ಮಲ್ಲಪ್ಪ, ಏತನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್, ಜಿಪಂ ಮಾಜಿ ಸದಸ್ಯ ಎಮ್ಮೇಹಟ್ಟಿ ಕೃಷ್ಣಮೂರ್ತಿ, ಮಾಜಿ ಉಪಾಧ್ಯಕ್ಷ ಎಚ್ ಎನ್.ತಿಪ್ಪೇಸ್ವಾಮಿ, ಚಿಕ್ಕಬೆನ್ನೂರು ಮುಖಂಡ ತೀರ್ಥಪ್ಪ ಇತರರಿದ್ದರು.