ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ

BRM ESAMUDRA 24 (1)
????????????????????????????????????
Published on

ಭರಮಸಾಗರ: ಸಮೀಪದ ಇಸಾಮುದ್ರ ಗ್ರಾಮದ ಐತಿಹಾಸಿಕ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಅರ್ಚಕರು ಧಾರ್ಮಿಕ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ರಥೋತ್ಸವಕ್ಕೆ ದೇವಾಲಯದ ಸದಸ್ಯರು, ಗ್ರಾಮಸ್ಥರು ಚಾಲನೆ ನೀಡಿದರು.

ಶ್ರೀ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿ ಮೂಲಕ ಕರೆತಂದು ಮಹಾರಥಕ್ಕೆ ಮೂರುಬಾರಿ ಪ್ರದಕ್ಷಿಣೆ ಮಾಡಿಸಿ ರಥದಲ್ಲಿ ಪ್ರತಿಷ್ಠಾಪಿಸಿ ಮಹಾ ದೀಪಾರತಿ ಸೇವೆ ಸಲ್ಲಿಸಲಾಯಿತು. ನಂತರ ದೇವರ ಮುಕ್ತಿ ಧ್ವಜ ಹಾಗೂ ಪ್ರಸಾದದ ಹೂಮಾಲೆಗಳನ್ನು ಹರಾಜು ಮಾಡಲಾಯಿತು.

ಸಂಜೆಯಾಗುತ್ತಿದ್ದಂತೆಯೇ ರಥ ಪೂರ್ವದಿಕ್ಕಿನ ಪಾದಕಟ್ಟೆಯ ಕಡೆ ಸಾಗಿತು. ಭಕ್ತರು ಜೈಕಾರಗಳೊಂದಿಗೆ ತಮ್ಮ ಕೈಗಳನ್ನು ಎತ್ತಿಮುಗಿದು ಭಕ್ತಿ, ತನ್ಮಯತೆನ್ನು ತೋರಿಸಿದರು. ಪಾದಕಟ್ಟೆಯಿಂದ ಪುನಃ ಯಥಾಸ್ಥಾನಕ್ಕೆ ರಥವನ್ನು ಎಳೆದು ತರಲಾಯಿತು. ರಥದ ಎತ್ತರಕ್ಕೂ ಜನರು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಹರಕೆ ಭಕ್ತಿ ಸಮರ್ಪಿಸಿದರು.

ವಿವಿಧೆಡೆಗಳಿಂದ ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಭಜಂತ್ರಿ ಕೋಲುಮೇಳ, ಭಜನೆ, ಮಂಗಳ ವಾದ್ಯ, ಸಾಂಪ್ರದಾಯಕ ವಾದ್ಯಮೇಳಗಳು ಉತ್ಸವಕ್ಕೆ ಮೆರುಗು ಹೆಚ್ಚಿಸಿದವು.

ಸಾಮೂಹಿಕ ವಿವಾಹ: ರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ 11ನೇ ವರ್ಷದ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಜವಳ, ಬಾಯಿ ಬೀಗ ಕಾರ್ಯ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಭಾನುವಾರ ಓಕಳಿ, ಗಂಗಾಪೂಜೆ, ಸ್ವಾಮಿಯ ಗುಡಿ ದುಂಬಿಸುವುದು, ಮಹಾಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವ ತೆರೆಕಾಣಲಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.

ಟ್ರಸ್ಟ್ ಕಮಿಟಿ ನಿರ್ದೇಶಕ ಡಿ.ಎಂ.ಶಾಂತಕುಮಾರ್, ಡಿ.ವಿ ಚನ್ನಬಸಪ್ಪ, ಎಚ್.ಸಿ.ಕರಿಬಸಪ್ಪ, ಎಸ್.ಎಚ್. ಗುರುಮೂರ್ತಿ, ಸಿ.ಜಿ.ಮಂಜುನಾಥ್, ಎಂ.ಬಿ.ಶಿವರಾಜ ಪಾಟೀಲ್, ಕೆ.ಆರ್, ಮುರುಗೇಶ್, ಕನ್ವೀನರ್ ಡಿ.ಎಸ್. ರುದ್ರಮುನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net