

ಭರಮಸಾಗರ: ಹೋಬಳಿಯ ಬಸವನ ಶಿವನಕೆರೆ ಬಸವೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆಗಳು ಜರುಗಿದವು. ಸಂಜೆ ಗೋಧೂಳಿ ಲಗ್ನದಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು.
ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವರ ಧ್ವಜ, ಹೂವಿನ ಹಾರಗಳ ಹರಾಜು ನಡೆಸಲಾಯಿತು.
ಪಾದಕಟ್ಟೆವರೆಗೆ ತೇರನ್ನು ಎಳೆದು ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದ ಬಳಿ ತರಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಂದಿಕೋಲು, ಡೊಳ್ಳುಕುಣಿತ, ಸಮಾಳ ಮುಂತಾದ ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರಗು ತಂದವು.