ಹಳ್ಳಿಗಳಲ್ಲಿ ಕಲಿಕಾ ವಾತಾವರಣ ನಿರ್ಮಿಸಿ

Bharamasagara, Halerangapur, Gram Vastavya,
Published on

ಭರಮಸಾಗರ: ಗ್ರಾಮೀಣ ಪ್ರದೇಶಗಳ ಅಂಗನವಾಡಿ, ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಎಲ್ಲರೂ ಗಮನಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಾಪ್ರಭು ಹೇಳಿದರು.

ಹಳೆರಂಗಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಡಿಸಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಳ ಸಮಸ್ಯೆ ಬಗೆಹರಿಸುವ ಜತೆಗೆ ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ನರೇಗಾ ಯೊಜನೆಯಡಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದೆ. ಸಾರ್ವಜನಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರದ ಯಾವುದೇ ಯೋಜನೆ ಇರಲಿ, ಅದು ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಾಗ ಆ ಯೋಜನೆ ಯಶಸ್ವಿಯಾಗಲು ಹಾಗೂ ಸರ್ಕಾರದ ಉದ್ದೇಶ ಈಡೇರಲು ಸಾಧ್ಯ ಎಂದು ತಿಳಿಸಿದರು.

ಜನರ ಸಮಸ್ಯೆ ಅರಿಯಲು ಜಿಲ್ಲಾಡಳಿತವೇ ತಮ್ಮ ಮನೆ ಬಾಗಿಲಿಗೆ ಬಂದಿದ್ದು, ಜನರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳು, ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆ ಪರಿಹರಿಸುವ ಉದ್ದೇಶ ಇದಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡಿವೆ. ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿವೆ. ಗ್ರಾಮದಲ್ಲಿನ ನಿವೇಶನ ರಹಿತರ ಪಟ್ಟಿ ಹಾಗೂ ಅಗತ್ಯವಿರುವ ಜಮೀನಿನ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಗ್ರಾಪಂ ಪಿಡಿಒ ತಯಾರಿಸಿ, ಸಲ್ಲಿಸಿದಲ್ಲಿ, ನಿಯಮಾನುಸಾರ ನಿವೇಶನ ಒದಗಿಸಿ, ಸರ್ಕಾರದ ವಿವಿಧ ಯೋಜನೆಗಳಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಸರ್ಕಾರದ ಉಪಯುಕ್ತ ಕಾರ್ಯಕ್ರಮ ಇದಾಗಿದ್ದು, ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆ, ಸೇವೆಗಳು ತ್ವರಿತವಾಗಿ ಜನರಿಗೆ ದೊರೆಯಲಿವೆ ಎಂದರು.

ಗರ್ಭಿಣಿಯರಿಗೆ ಸೀಮಂತ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗರ್ಭಿಣಿಯರಿಗೆ ಆರತಿ ಬೆಳಗಿ ಸೀಮಂತ ಕಾರ್ಯ

ಮಾಡಿದರು. ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಣೆ, ಪೋಷಣ್ ಅಭಿಯಾನದಡಿ ಮಕ್ಕಳಿಗೆ ಪೌಷ್ಠಿಕ ಆಹಾರವುಳ್ಳ ಅನ್ನಪ್ರಾಶನ ಮಾಡಿಸಿದರು. ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ನಾಟಕ ಪ್ರದರ್ಶನ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲಾನಿಕೇತನ ಕಲಾತಂಡವು ಅಸ್ಪಷ್ಯತೆ ನಿವಾರಣೆ ಕುರಿತ ಜನ ಜಾಗೃತಿ ನಾಟಕವನ್ನು ಪ್ರಸ್ತುತಪಡಿಸಿತು.

ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಡಿಎಚ್‌ಒ ಡಾ.ರಂಗನಾಥ್, ಡಿಡಿಪಿಐ ರವಿಶಂಕರ್ ರೆಡ್ಡಿ ಇತರರಿಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net