

ಭರಮಸಾಗರ: ಸಮೀಪದ ಎಮ್ಮೇಹಟ್ಟಿ ಗ್ರಾಮದಲ್ಲಿ ಗುರುವಾರ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿತು.
ಇಲ್ಲಿನ ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಹಲವು ವರ್ಷಗಳಿಂದ ಜಾತ್ರೆ ನಡೆಸಲಾಗುತ್ತಿದೆ. ಕಳೆದ 3 ವರ್ಷಗಳಿಂದ ರಥೋತ್ಸವ ಆಚರಿಸಲಾಗುತ್ತಿದೆ. ಅತ್ತ ನಾಯಕನಹಟ್ಟಿಯಲ್ಲಿ ದೊಡ್ಡ ರಥೋತ್ಸವ ಆರಂಭವಾಗುತ್ತಿದ್ದಂತೆ ಇತ್ತ ಗ್ರಾಮದಲ್ಲೂ ತೇರು ಆರಂಭವಾಯಿತು.
ಬಣ್ಣ ಬಣ್ಣದ ಬಟ್ಟೆ, ಹೂವುಗಳಿಂದ ತೇರನ್ನು ಅಲಂಕರಿಸಲಾಗಿತ್ತು. ದೇಗುಲದಲ್ಲಿ ಬೆಳಗ್ಗೆಯಿಂದ ಪೂಜಾ ಕೈಂಕರ್ಯ ನಡೆದವು. ಉತ್ಸವಕ್ಕೆ ಬಂದ ಭಕ್ತರು ದೇಗುಲದ ಮುಂಭಾಗದಲ್ಲಿ ಒಣ ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು. ಉತ್ಸವದ ಪ್ರಯುಕ್ತ ಬುಧವಾರದಿಂದ ದಾಸೋಹ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.