ಆರ್ಥಿಕ ಭದ್ರತೆಗೆ ರೇಷ್ಮೆ ಕೃಷಿ ಸಹಕಾರಿ

BMS AZAD NAGARA 30 (2)
Published on

ಭರಮಸಾಗರ: ರೈತರ ಆರ್ಥಿಕ ಸಂಕಷ್ಟ ನಿವಾರಣೆಗೆ ರೇಷ್ಮೆ ಕೃಷಿ ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಾದಾಪೀರ್ ತಿಳಿಸಿದರು.

ತಾಪಂ, ರೇಷೆ ಇಲಾಖೆ, ತೋಳಹುಣಸೆ ರೇಷ್ಮೆ ತರಬೇತಿ ಸಂಸ್ಥೆ ಸಹಯೋಗದಲ್ಲಿ ಆಜಾದ್ ನಗರ ಗ್ರಾಮದ ಜಮೀನಿನಲ್ಲಿ ಗುರುವಾರ ಏರ್ಪಡಿಸಿದ್ದ ಕ್ಷೇತ್ರಮಟ್ಟದ ರೇಷ್ಮೆ ಕೃಷಿ ತರಬೇತಿ ಕಾರ್ಯಾಗಾರ, ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಷ್ಮೆ ಕೃಷಿ ಮತ್ತು ಹೈನುಗಾರಿಕೆ ಮಾಡಿದ ಯಾವ ರೈತರೂ ನಷ್ಟ ಅನುಭವಿಸಿದ ಉದಾಹರಣೆ ಇಲ್ಲ. ಹೀಗಾಗಿ ಕೃಷಿ ಚಟುವಟಿಕೆ ಜತೆಗೆ ಲಾಭದಾಯಕ ರೇಷ್ಮೆ ಕೃಷಿ ಕೈಗೊಳ್ಳಬೇಕು. ಅಧಿಕಾರಿಗಳೇ ತಮ್ಮ ಬಳಿಗೆ ಬಂದು ಉಪಯುಕ್ತ ಮಾಹಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕರಪತ್ರ ಹೊರಡಿಸಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದರಿಂದ ಎಲ್ಲರಿಗೂ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ದ್ವಿತಳಿ ರೇಷ್ಮೆ ಕೃಷಿ ಹೆಚ್ಚು ಲಾಭದಾಯಕವಾಗಿದೆ. ರೇಷ್ಮೆ ಹುಳುಗಳಿಗೆ ವೈರಸ್ ಹಾವಳಿ ಹೆಚ್ಚು. ಕಾಲಕಾಲಕ್ಕೆ ಸ್ವಚ್ಛತೆ ಕೈಗೊಂಡು ಸೋಂಕು ಹರಡದಂತೆ ಎಚ್ಚರಿಕೆ ವಹಿಸಿದರೆ ಅಧಿಕ ಇಳುವರಿ ಪಡೆಯಬಹುದು. ಹಾಲು ಹುಳುಗಳನ್ನು ಬರಿಗೈಯಲ್ಲಿ ಮುಟ್ಟದೆ ಕೈಗವಸು ಸಹಾಯದಿಂದ ಡಬ್ಬಿಯಲ್ಲಿ ಸಂಗ್ರಹಿಸಿ ದೂರಕ್ಕೆ ಕೊಂಡೊಯ್ದು ಹೂತುಹಾಕಬೇಕು ಎಂದು ತಿಳಿಸಿದರು.

ಕಾಲ್ಗೆರೆ ಗ್ರಾಪಂ ಅಧ್ಯಕ್ಷೆ ಶಂಷಾದ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿ ಶ್ರೀನಿವಾಸಲು, ರಾಜಗೋಪಾಲ, ಎಚ್.ಕೆ.ಹರಿಕೃಷ್ಣ, ಎಸ್.ಎನ್.ಬಾವಿಕಟ್ಟೆ, ಸಿ.ಡಿ.ಉಷಾ, ಸಿಬ್ಬಂದಿ ಹಾಗೂ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net