ಕಳೆಗಟ್ಟುತ್ತಿದೆ ಭರಚುಕ್ಕಿ ಜಲಪಾತ

16-KGL-3,,,
Published on

ಕೊಳ್ಳೇಗಾಲ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಭರಚುಕ್ಕಿ ಕಳೆಗಟ್ಟಿದ್ದು, ಕಾನನದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿರುವ ಫಾಲ್ಸ್ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಜೂನ್, ಜುಲೈನಲ್ಲಿ ಮುಂಗಾರು ಮಳೆ ಅಬ್ಬರಿಸಿದರೆ ಕಾವೇರಿ ಮೈದುಂಬಿ ಹರಿದು ಭರಚುಕ್ಕಿ ಧುಮ್ಮಿಕ್ಕುವುದು ಸಾಮಾನ್ಯ. ಆದರೆ ಈಗ ತಿಂಗಳ ಹಿಂದಷ್ಟೇ ನೀರಿಲ್ಲದೆ ಸೊರಗಿದ್ದ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಉತ್ತಮ ಪೂರ್ವ ಮುಂಗಾರಿನಿಂದ ಭೋರ್ಗರೆಯಲು ಆರಂಭಿಸಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಜಲಪಾತದ ಅಬ್ಬರ ಹೆಚ್ಚಾಗಲಿದೆ.

ಜಲಪಾತ ವೀಕ್ಷಣೆಗೆ ಶನಿವಾರ, ಭಾನುವಾರ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದರು. ಸ್ಥಳೀಯ ಸಣ-ಪುಟ್ಟ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿತ್ತು. ಭರಚುಕ್ಕಿಯ ರುದ್ರರಮಣೀಯ ದೃಶ್ಯ ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಇನ್ನೆರಡು ತಿಂಗಳು ಸ್ಥಳೀಯ ವ್ಯಾಪಾರಿಗಳಿಗೆ ಸುಗಿ ್ಗಕಾಲವಾಗಿರಲಿದೆ.

ಫಾಲ್ಸ್ ಅಲ್ಲದೆ ಶಿವನಸಮುದ್ರ ಸುತ್ತಲಿನ ಬೆಟ್ಟ-ಗುಡ್ಡಗಳು ಹಸಿರನ್ನು ಹೊದ್ದಿವೆ. ಉತ್ತಮ ಮಳೆಯಿಂದ ಮರ-ಗಿಡಗಳು ನಳನಳಿಸುತ್ತಿವೆ. ಬ್ರಿಟಿಷ್ ಕಾಲದಲ್ಲಿ ಕಟ್ಟಿದ್ದ ವೆಸ್ಲಿ ಸೇತುವೆ (ಕಲ್ಲಿನ ಸೇತುವೆ), ಬೆಂಗಳೂರು ಮಾರ್ಗಕ್ಕೆ ಅಡ್ಡಲಾಗಿ ನಿರ್ಮಿಸಿರುವ ಹೊಸ ಹಾಗೂ ಹಳೆಯ ಸೇತುವೆಗಳ ಸುತ್ತಲಿನ ಪರಿಸರ ಜಲರಾಶಿಯಿಂದ ಕಣ್ಮನ ಸೆಳೆಯುತ್ತಿದೆ.

ಮೈ ಕೊರೆಯುವ ಚಳಿ

ಮುಂಗಾರು ಸಮಯಯಲ್ಲಿ ಹೆಚ್ಚು ಕಾಲ ಮೋಡ ಕವಿದ ವಾತಾವರಣವಿರಲಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಕಾವೇರಿ ಹರಿಯುವ ಶಿವಸಮುದ್ರದ ಸುತ್ತಮುತ್ತ ಮೈ ಕೊರೆಯುವ ಚಳಿ, ಆಗಾಗ್ಗೆ ಬೀಳುವ ಮಳೆ ಸಿಂಚನ ಪ್ರವಾಸಿಗರಿಗೆ ಮುದ ನೀಡಲಿದೆ. ಇನ್ನು ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಿಂದ ದರ್ಗಾವರೆಗೆ ಸಿಗುವ ಫಿಶ್ ಫ್ರೈ ಅಂಗಡಿಗಳು, ಭರಚುಕ್ಕಿ ಅಂಗಳದಲ್ಲಿ ಸಿಗುವ ಚುರುಮುರಿ, ಐಸ್ ಕ್ರೀಂ ಅಂಗಡಿ, ಹಣ್ಣಿನ ಅಂಗಡಿ, ಸುಟ್ಟ ಜೋಳ. ಹೀಗೆ ವಿವಿಧ ತಿಂಡಿಗಳ ಅಂಗಡಿಗಳು ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿದೆ.

ಕಣ್ಣು ಸೆಳೆವ ಬೆಟ್ಟ-ಗುಡ್ಡ

ಶಿವನಸಮುದ್ರವನ್ನು ಭೂಲೋಕದ ಸ್ವರ್ಗ ಎಂದೇ ಕರೆಯಬಹುದಾಗಿದೆ. ಭರಚುಕ್ಕಿ, ಸಮೂಹ ದೇವಾಲಯಗಳಿಗೆ ತೆರಳುವ ಮಾರ್ಗಮಧ್ಯೆ ಸಿಗುವ ಪಾರಂಪಾರಿಕ ಸೇತುವೆ, ಭೋರ್ಗರೆದು ಸ್ವಚ್ಛಂದವಾಗಿ ಹರಿಯುವ ನದಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಅಲ್ಲದೆ ಬೆಂಗಳೂರು-ದಿಂಡಿಗಲ್ ಸಂಪರ್ಕ ಬೆಸೆಯುವ ನೂತನ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಹೊಸ ಸೇತುವೆ ಇದೀಗ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ.

ಉತ್ತಮ ಮಳೆಯಿಂದ ಕಾವೇರಿ ನದಿ ನೀರು ಹೆಚ್ಚಾಗಿದೆ. ಭರಚುಕ್ಕಿ ಫಾಲ್ಸ್ ಭೋರ್ಗರೆಯುತ್ತಿದೆ. ಹಾಗಾಗಿ ರಾಜ್ಯದ ನಾನಾ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರು. ಇನ್ಮುಂದೆ ಇನ್ನೂ ಹೆಚ್ಚಾಗಲಿದೆ. ಯು.ಜಿ.ಭರತ್ ಆರ್‌ಎಫ್‌ಒ, ಕೊಳ್ಳೇಗಾಲ ಬಫರ್ ವಲಯ, ಮಲೆ ಮಹದೇಶ್ವರ ವನ್ಯ ಜೀವಿಧಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net