ಸಕ್ರೆಬೈಲು ಬಿಡಾರದ ಗರ್ಭಿಣಿ ಭಾನುಮತಿ ಬಾಲಕ್ಕೆ ಗಾಯ

bhanumati
ಭಾನುಮತಿ ಬಾಲಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯಾಧಿಕಾರಿ ಡಾ.ವಿನಯ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.
Published on

ಶಿವಮೊಗ್ಗ: ಕಾಡಿನಲ್ಲಿ ಮೇಯಲು ತೆರಳಿದ್ದ ಸಕ್ರೆಬೈಲು ಬಿಡಾರದ ಆನೆ ಭಾನುಮತಿ ಬಾಲಕ್ಕೆ ಗಾಯವಾಗಿದೆ. ಸುಮಾರು ಅರ್ಧ ಇಂಚಿನಷ್ಟು ಬಾಲದ ಆಳಕ್ಕೆ ಪೆಟ್ಟಾಗಿದೆ. ಯಾರಾದರೂ ದುರುದ್ದೇಶದಿಂದ ಬಾಲಕ ಹರಿತವಾದ ಆಯುದದಿಂದ ಹೊಡೆದಿದ್ದಾರೆಯೇ? ಅಥವಾ ಕಾಡಿನಲ್ಲಿ ಯಾವುದಾದರೂ ಚೂಪಾದ ವಸ್ತು, ಮರದ ಕೊಂಬೆಯ ಅರ್ಧಂಬರ್ಧ ಕತ್ತರಿಸಿದ ಭಾಗಕ್ಕೆ ತಗುಲಿದ ಪರಿಣಾಮ ಬಾಲಕ್ಕೆ ಪೆಟ್ಟಾಗಿದೆಯೇ ಎಂಬುದು ತಿಳಿದಿಲ್ಲ.

ತುಂಬು ಗರ್ಭಿಣಿಯಾಗಿರುವ ಭಾನುಮತಿ ಭಾನುವಾರ ಮಧ್ಯಾಹ್ನಕ್ಕೂ ಮುನ್ನ ಬಿಡಾರದಿಂದ ಕಾಡಿಗೆ ತೆರಳಿತ್ತು. ಆಕೆ ಮೇಲೆ ನಿಗಾ ವಹಿಸುತ್ತಿರುವ ಕಾವಾಡಿಗರಾದ ಮೊಹಮ್ಮದ್ ಹಾಗೂ ಸುದೀಪ್ ಭಾನುವಾರ ಸಂಜೆ ಕಾಡಿಗೆ ತೆರಳಿ ನೋಡಿದಾಗಲೂ ಭಾನುಮತಿಗೆ ಏನೂ ಆಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಕಾಡಿನಿಂದ ಬಿಡಾರಕ್ಕೆ ಆಕೆಯನ್ನು ಕರೆತರಲು ತೆರಳಿದ್ದ ಕವಾಡಿಗರಿಗೆ ಆಶ್ಚರ್ಯ ಕಾದಿತ್ತು. ಆನೆಯ ಬಾಲದಿಂದ ರಕ್ತ ಸೋರುತ್ತಿತ್ತು.
ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ಭಾನುಮತಿಗೆ ಆರೈಕೆ ಮಾಡುತ್ತಿದ್ದಾರೆ. ಆಕೆಯ ಬಾಲಕ್ಕೆ ಆರೇಳು ಹೊಲಿಗೆ ಹಾಕಲಾಗಿದೆ. ನೋವು ಸ್ವಲ್ಪ ಕಡಿಮೆಯಾದಂತಿದೆ. ಮಂಗಳವಾರದ ವೇಳೆಗೆ ಆಕೆ ಎಂದಿನಂತೆ ಗೆಲುವಿನಲ್ಲಿದ್ದಾಳೆ. ಆದರೆ ಈ ಘಟನೆ ಬಿಡಾರದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಶ್ಚರ್ಯ ಹಾಗೂ ಆತಂಕ ಮೂಡಿಸಿದೆ. ಬಿಡಾರದ ಆನೆಯೊಂದಕ್ಕೆ ಇದೇ ಮೊದಲ ಬಾರಿಗೆ ಇಂತಹ ಗಾಯವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್, ಇದು ನಿಜಕ್ಕೂ ಶಾಕ್ ಉಂಟುಮಾಡಿದೆ. ಆನೆ ಮೇಲೆ ಯಾರಿಗೂ ಕೋಪ ಇರಲು ಸಾಧ್ಯವೇ ಇಲ್ಲ. ಅರಣ್ಯದಲ್ಲಿ ಒಂಟಿಯಾಗಿರುವ ಆನೆ ಬಳಿ ತೆರಳಲು ಸಾಮಾನ್ಯ ಜನರು ಭಯಪಡುತ್ತಾರೆ. ಬಿಡಾರದ ಸುತ್ತಮುತ್ತಲ ಪ್ರದೇಶಗಳ ಜನರಿಗೂ ಆನೆಗಳು ಅಚ್ಚುಮೆಚ್ಚು. ಇನ್ನು ಸಿಬ್ಬಂದಿ ಪರಸ್ಪರ ಮತ್ಸರದಿಂದ ಇಂತಹ ಹೀನ ಕೃತ್ಯ ಮಾಡಲು ಸಾಧ್ಯವಿಲ್ಲ. ಆದರೂ ಇದನ್ನು ಗಂಭೀರವಾಗಿ ಸ್ವೀಕರಿಸಿ ಎಲ್ಲ ಆಯಾಮಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net