

ಉಡುಪಿ: ರಥಬೀದಿ ಭಂಡಾರಕೇರಿ ಮಠದಲ್ಲಿ ಸೆ. 4ರಿಂದ 16ರವರೆಗೆ ಬೆಳಗ್ಗೆ 9 ರಿಂದ 12ರವರೆಗೆ ಪ್ರೋಷ್ಠಪದಿ ಭಾಗವತ ಪ್ರವಚನ ಏರ್ಪಡಿಸಲಾಗಿದೆ ಎಂದು ಭಂಡಾರಕೇರಿ ಮಠದ ಶ್ರಿ ವಿದ್ಯೇಶ ತೀರ್ಥ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ರಂದು ಬೆಳಗ್ಗೆ 9 ಗಂಟೆಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದಾರೆ. 16ರಂದು ಸಾಯಂಕಾಲ 5 ಗಂಟೆಗೆ ಪ್ರೋಷ್ಠಪದಿ ಮಂಗಲ ಮಹೋತ್ಸವ ನಡೆಯಲಿದ್ದು, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಭಾಗವತ ಅಭಿಯಾನದಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಗುವುದು. 13 ದಿನಗಳ ಕಾಲ 26 ಮಂದಿ ವಿದ್ವಾಂಸರಿಂದ ಭಾಗವತ ಪಾರಾಯಣ ನಡೆಯಲಿದೆ ಎಂದು ತಿಳಿಸಿದರು.
17ಕ್ಕೆ ಚಾತುರ್ಮಾಸ್ಯ ಸಮಾರೋಪ
ಸೆ.17ರಂದು ಸಾಯಂಕಾಲ 5.30ಕ್ಕೆ ಭಾಗವತ ನೀರಾಜನೋತ್ಸವ ಹಾಗೂ 45ನೇ ಚಾತುರ್ಮಾಸ್ಯ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ ಎಂದರು.
ಭಾಗವತ ಆದರ್ಶ ಗ್ರಂಥ
ಶುಕಾಚಾರ್ಯರು ಪರೀತ ರಾಜನಿಗೆ ಭಾಗವತ ಸಪ್ತಾಹದ ಮೂಲಕ ಉಪದೇಶ ನೀಡಿದ್ದರು. 200 ವರ್ಷಗಳ ನಂತರ ಭಾಗವತ ಸಪ್ತಾಹ ನಡೆದಿತ್ತು. ಕೃಷ್ಣನ ನಿರ್ಯಾಯದ 3000 ವರ್ಷದ ಬಳಿಕ ನೈಮಿಷಾರಣ್ಯದಲ್ಲಿ ಸನಕಾದಿ ಋಷಿಗಳು ಭಾಗವತ ಪ್ರೋಷ್ಠಪದಿ ನಡೆಸಿದ ಬಗ್ಗೆ ಉಲ್ಲೇಖಗಳಿವೆ. ಜೀವನ ಮೌಲ್ಯಗಳ ಜೊತೆಗೆ ಸಮಾಜಮುಖಿಯಾಗಿ ಬದುಕುವುದು ಹೇಗೆ ಎಂಬುದನ್ನು ಭಾಗವತ ತಿಳಿಸುತ್ತದೆ. ಮನೆ ಮನೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾಗವತ ಅಭಿಯಾನ ನಡೆಸಲಾಗುತ್ತಿದೆ. ಚಾತುರ್ಮಾಸ್ಯದ ಸಮಯದಲ್ಲಿ 300 ಮನೆಗಳಲ್ಲಿ ಭಾಗವತ ನೀರಾಜನೋತ್ಸವ ನಡೆದಿದೆ. ಈ ಅಭಿಯಾನ ಮುಂದುವರಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಚಾತುರ್ಮಾಸ್ಯ ಸೇವಾ ಸಮಿತಿಯ ಪ್ರಮುಖರಾದ ಚಂದ್ರಶೇಖರ್ ಆಚಾರ್ಯ, ರಾಜೇಶ್ ಭಟ್, ಶ್ರೀನಿವಾಸ ಬಾಧ್ಯ, ವಿಷ್ಣುಪ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು.