

ಉಡುಪಿ: ಅಯೋಧ್ಯೆ ರಾಮದೇವರ ಸನ್ನಿಧಿಯಲ್ಲಿ ರಾಮಾಯಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಲರಾಮಾಯಣಾಶ್ರಮ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 14,000 ಚದರಡಿಯ ಜಾಗ ಖರೀದಿಸಲಾಗಿದೆ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ರಥಬೀದಿಯ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಮಾಯಣಗಳಿಗೂ ಮೂಲ ಹಯಗ್ರೀವ ರಾಮಾಯಣ. ಮಧ್ವಾಚಾರ್ಯರು ಮಹಾಭಾರತ ತಾತ್ಪರ್ಯ ರ್ನಿಣಯದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, 600ಕ್ಕೂ ಅಧಿಕ ಶ್ಲೋಕಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಇಡಲಾಗುವುದು. ಜೊತೆಗೆ ಭಕ್ತರಿಗೆ ವಸತಿ, ನಿತ್ಯ ಭಜನೆ, ಪ್ರಾರ್ಥನೆಗೆ ಅನುಕೂಲ ಕಲ್ಪಿಸಲಾಗುವುದು. ಉತ್ತರ ಭಾರತದಲ್ಲಿ ಧರ್ಮಪ್ರಚಾರ ಮಾಡುವುದು ಯೋಜನೆ ಮುಖ್ಯ ಉದ್ದೇಶ. ಇದೇ ರೀತಿ ಭಾಗವತ ಪ್ರಸಾರ ನಿಟ್ಟಿನಲ್ಲಿ ಋಷಿ, ಮುನಿಗಳ ಕಾರ್ಯಕ್ಷೇತ್ರ ನೈಮಿಷಾರಣ್ಯದಲ್ಲಿ ಭಾಗವತ ಸತ್ಸಂಗ ಆಶ್ರಮ ನಿರ್ಮಿಸಿ, ಮಧ್ವಾಚಾರ್ಯರ ಭಾಗವತ ತಾತ್ಪರ್ಯ ರ್ನಿಣಯದ ಶಿಲಾಲೇಖನವನ್ನು ಅಳವಡಿಸುವ ಚಿಂತನೆ ನಡೆಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಭಾಗವತ ನಿರಾಜನೋತ್ಸವ
ಉಡುಪಿಯಲ್ಲಿ 37 ವರ್ಷದ ಬಳಿಕ ಚಾತುರ್ಮಾಸ್ಯ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಜನರಿಗೆ ಭಾಗವತದ ಹಿರಿಮೆಯನ್ನು ತಿಳಿಸುವ ನಿಟ್ಟಿನಲ್ಲಿ ಮನೆ ಮನೆಗಳಿಗೆ ತೆರಳಿ ಭಾಗವತ ನಿರಾಜನೋತ್ಸವ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 55 ಮನೆಗಳಲ್ಲಿ ಭಾಗವತದ ಪ್ರೇರಣಾದಾಯಿ ಸಂದೇಶ ನೀಡಲಾಗಿದೆ. ವ್ರತ ಸಮಾಪ್ತಿಗೆ ಮುನ್ನ 500 ಮನೆಗಳಲ್ಲಿ ನಿರಾಜನೋತ್ಸವ ಆಚರಿಸುವ ಗುರಿ ಹೊಂದಲಾಗಿದೆ ಎಂದರು. ವಿದ್ವಾನ್ ಬಿ. ಗೋಪಾಲಾಚಾರ್ಯ, ಚಾತುರ್ಮಾಸ್ಯ ಸಮಿತಿಯ ವಿಷ್ಣು ಪಾಡಿಗಾರ್, ಶ್ರೀನಿವಾಸ್ ಯು.ಬಿ. ಮೊದಲಾದವರು ಉಪಸ್ಥಿತರಿದ್ದರು.