ತತ್ವಜ್ಞಾನಾರ್ಜನೆ ವೃದ್ಧಾಪ್ಯಕ್ಕೆ ಸೀಮಿತವಲ್ಲ

udp-4-bhandarakeri
Published on

ಉಡುಪಿ: ಪ್ರಾಮಾಣಿಕವಾಗಿ ಭಗವಂತನ ಭಕ್ತಿ ಮಾಡಿದರೆ ಬದುಕುನಲ್ಲಿ ಸಾಧನೆಯ ಹಾದಿ ತೋರಿಸುತ್ತಾನೆ. ಯೌವನದಲ್ಲಿಯೂ ದೇವರನ್ನು ಸ್ಮರಿಸಬೇಕು. ತತ್ವಜ್ಞಾನಾರ್ಜನೆ ನಿವೃತ್ತಿ ಅಥವಾ ವೃದ್ಧಾಪ್ಯಕ್ಕೆ ಸೀಮಿತವಾಗಬಾರದು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಬುಧವಾರ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 45ನೇ ಚಾತುಮಾರ್ಸ್ಯ ಅಂಗವಾಗಿ ರಥಬೀದಿಯ ಭಂಡಾರಕೇರಿ ಮಠದಲ್ಲಿ ಆಯೋಜಿಸಿರುವ ಪ್ರೋಷ್ಠಪದಿ ಭಾಗವತ ಪ್ರವಚನ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ವೇದವ್ಯಾಸರಿಗೆ 17 ಪುರಾಣಗಳನ್ನು ನೀಡಿದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಹಿನ್ನೆಲೆಯಲ್ಲಿ 18ನೇ ಪುರಾಣವಾಗಿ ಭಾಗವತ ಸಮಾಜಕ್ಕೆ ದೊರೆತಿದೆ. ನಿತ್ಯ ಕೆಲಸದಲ್ಲಿ ಭಾಗವತ ಚಿಂತನೆ ಅಳವಡಿಸಿಕೊಂಡರೆ ಬದುಕು ಸುಲಭವಾಗಲಿದೆ ಎಂದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕಲಿಯುಗದಲ್ಲಿ ಭಾಗವತ ಶ್ರವಣ, ಕೀರ್ತನೆಗೆ ಪರಸ್ಪರ ಸಂಬಂಧ, ಉತ್ತಮ ಫಲವಿದೆ. ಭಕ್ತಿ ಹುಟ್ಟಿಸುವುದೇ ಭಾಗವತ. ಮಾದಕ ವ್ಯಸನಕ್ಕಿಂತ ಮಾಧವನ ವ್ಯಸನದಿಂದ ಜೀವನದಲ್ಲಿ ಉನ್ನತಿ ಕಾಣಬಹುದು ಎಂದರು.

ಚಾತುಮಾರ್ಸ್ಯ ಸಮಿತಿಯ ಚಂದ್ರಶೇಖರ್​, ವಿಷ್ಣು ಪ್ರಸಾದ್​ ಪಾಡಿಗಾರು, ಜಯರಾಮ ಆಚಾರ್ಯ ಮತ್ತು ಯು. ಬಿ. ಶ್ರೀನಿವಾಸ್​ ಉಪಸ್ಥಿತರಿದ್ದರು. ಉಷಾ ಹೆಬ್ಬಾರ್​ ಮತ್ತು ಬಳಗದವರಿಂದ ಪ್ರಾರ್ಥನೆ ನಡೆಯಿತು. ನಾಗೇಂದ್ರ ಆಚಾರ್ಯ ಸ್ವಾಗತಿಸಿ, ವಾಸುದೇವ ಭಟ್​ ಪೆರಂಪಳ್ಳಿ ನಿರೂಪಿಸಿದರು.
ಬಳಿಕ ವೇದವ್ಯಾಸ ಪುರಾಣಿಕ್​ ಮತ್ತು ಆಯನೂರು ಮಧುಸೂದನ ಆಚಾರ್ಯ ಅವರಿಂದ ಮೊದಲ ದಿನದ ಭಾಗವತ ಪ್ರವಚನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net